
ವಿಜಯಪುರ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದ ಸಿಡಿಲು ಬಡಿತದಿಂದ ಪ್ರಸಿದ್ಧ ಅಮೋಘ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿದ್ದ ಮಾಲಕಂಬ ಸಂಪೂರ್ಣವಾಗಿ ಧ್ವಂಸಗೊಂಡ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಮಳೆಗಾಲದ ಮುನ್ಸೂಚನೆಯೊಂದಿಗೆ ಆಕಾಶದಲ್ಲಿ ಕಪ್ಪು ಮೋಡಗಳು ಕವಿದಿದ್ದ ಸಂದರ್ಭದಲ್ಲಿ ಅಕಸ್ಮಾತ್ ಮಿಂಚು-ಗುಡುಗು ಸಹಿತ ಭಾರೀ ಸಿಡಿಲು ಬಡಿದಿದ್ದು, ನೇರವಾಗಿ ದೇವಸ್ಥಾನದ ಆವರಣದಲ್ಲಿದ್ದ ಮರದ ಮಾಲಕಂಬಕ್ಕೆ ತಗುಲಿತು. ಸಿಡಿಲಿನ ಭೀಕರತೆಗೆ ಮಾಲಕಂಬ ತುಂಡು ತುಂಡಾಗಿ ಛಿದ್ರ ಛಿದ್ರಗೊಂಡು ನೆಲಕ್ಕುರುಳಿದ ದೃಶ್ಯ ಭಯಾನಕವಾಗಿತ್ತು ಎಂದು ಸ್ಥಳೀಯರು ವಿವರಿಸಿದರು.
ಈ ಮಾಲಕಂಬವು ಹಲವು ವರ್ಷಗಳ ಇತಿಹಾಸ ಹೊಂದಿದ್ದು, ಗ್ರಾಮದಲ್ಲಿ ನಡೆಯುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪ್ರದರ್ಶನಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು.
ವಿಶೇಷವಾಗಿ ಯುವಕರು ಮತ್ತು ಕ್ರೀಡಾಪಟುಗಳು ತರಬೇತಿಗಾಗಿ ಬಳಸುತ್ತಿದ್ದ ಈ ಮಾಲಕಂಬ ಧ್ವಂಸವಾಗಿರುವುದು ಗ್ರಾಮಸ್ಥರಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.
ಸಿಡಿಲು ಬಡಿದ ಸಮಯದಲ್ಲಿ ದೇವಸ್ಥಾನದಲ್ಲಿ ಯಾರೂ ಇಲ್ಲದಿರುವುದು ದೊಡ್ಡ ಅನಾಹುತ ತಪ್ಪಿಸಿದಂತಾಗಿದೆ. ಇಲ್ಲವಾದರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂದು ಗ್ರಾಮಸ್ಥರು ಹೇಳಿದರು. ಸಿಡಿಲಿನ ಹೊಡೆತದಿಂದ ಸುತ್ತಮುತ್ತಲಿನ ಕೆಲವು ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಪ್ರಮಾಣವನ್ನು ಅಳೆಯಲಾಗುತ್ತಿದ್ದು, ಪುನರ್ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸುವ ನಿರೀಕ್ಷೆಯಿದೆ.
ಗ್ರಾಮದ ಹಿರಿಯರು ಮಾತನಾಡಿ, ಅಮೋಘ ಸಿದ್ಧೇಶ್ವರ ದೇವಾಲಯ ಹಾಗೂ ಮಾಲಕಂಬವು ನಮ್ಮ ಗ್ರಾಮದ ಸಂಪ್ರದಾಯ, ಭಕ್ತಿ ಮತ್ತು ಕ್ರೀಡಾ ಸಂಸ್ಕೃತಿಯ ಸಂಕೇತವಾಗಿದೆ. ಇದನ್ನು ಪುನಃ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.
ಈ ಘಟನೆ ಗ್ರಾಮದಲ್ಲಿ ಭೀತಿ ಹಾಗೂ ದುಃಖ ಎರಡನ್ನೂಂಟುಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / jyothi deshpande