
ನವದೆಹಲಿ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಗುರುದೇವ್ ರವೀಂದ್ರನಾಥ ಟಾಗೋರ್ ಅವರನ್ನು ಸ್ಮರಿಸುವ ಮೂಲಕ ದೇಶದ ಇಂಧನ ವಲಯದ ಪ್ರಮುಖ ಸಾಧನೆಗಳನ್ನು ಹಂಚಿಕೊಂಡರು.
ಭಾಷಣದ ಆರಂಭದಲ್ಲಿ ಟ್ಯಾಗೋರ್ ಅವರನ್ನು ಬಹುಮುಖಿ ಪ್ರತಿಭೆ, ಚಿಂತಕ ಮತ್ತು ಅನೇಕ ಪ್ರಸಿದ್ಧ ಸಂಸ್ಥೆಗಳ ಸ್ಥಾಪಕರಾಗಿ ಮೋದಿ ಬಣ್ಣಿಸಿದರು. ತಮ್ಮ ಶಾಂತಿನಿಕೇತನ ಭೇಟಿ ಸ್ಮರಣೀಯವಾಗಿತ್ತು ಎಂದು ಹೇಳಿದ ಅವರು, ಮೇ 9ರಂದು ಟ್ಯಾಗೋರ್ ಜನ್ಮದಿನವಾಗಿರುವುದನ್ನು ಉಲ್ಲೇಖಿಸಿದರು.
ಪರಮಾಣು ಶಕ್ತಿಯಲ್ಲಿ ಐತಿಹಾಸಿಕ ಮೈಲಿಗಲ್ಲು
ತಮಿಳುನಾಡಿನ ಕಲ್ಪಾಕ್ಕಂ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಸಾಧನೆಗೆ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ, ಕೋರ್ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡದ್ದು ಭಾರತದ ಪರಮಾಣು ಇಂಧನ ಪ್ರಯಾಣದಲ್ಲಿ ಮಹತ್ವದ ಘಟ್ಟವಾಗಿದೆ ಎಂದು ಹೇಳಿದರು. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾದ ಈ ಯೋಜನೆ ದೇಶದ ವೈಜ್ಞಾನಿಕ ಸಾಮರ್ಥ್ಯ ಮತ್ತು ಆತ್ಮನಿರ್ಭರತೆಯ ಪ್ರತೀಕವಾಗಿದೆ ಎಂದರು.
ಪವನ ಶಕ್ತಿಯಲ್ಲಿ 56 ಗಿಗಾವ್ಯಾಟ್ ಸಾಧನೆ
ಪವನ ವಿದ್ಯುತ್ ಕ್ಷೇತ್ರದಲ್ಲಿಯೂ ದೇಶವು ವೇಗವಾಗಿ ಬೆಳೆಯುತ್ತಿರುವುದನ್ನು ಮೋದಿ ವಿವರಿಸಿದರು. ಕಳೆದ ಒಂದು ವರ್ಷದಲ್ಲಿ 6 ಗಿಗಾವ್ಯಾಟ್ ಸಾಮರ್ಥ್ಯ ಹೆಚ್ಚಿಸಿಕೊಂಡು, ಒಟ್ಟು ಉತ್ಪಾದನಾ ಸಾಮರ್ಥ್ಯ 56 ಗಿಗಾವ್ಯಾಟ್ಗೆ ತಲುಪಿದೆ ಎಂದು ಹೇಳಿದರು. ಇದು ದೇಶದ ಇಂಧನ ಭದ್ರತೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆ ಎಂದು ಅಭಿಪ್ರಾಯಪಟ್ಟರು.
ಜನಗಣತಿ, ಡಿಜಿಟಲೀಕರಣಕ್ಕೆ ಮನವಿ
ಕಾರ್ಯಕ್ರಮದ ವೇಳೆ ನಡೆಯುತ್ತಿರುವ ಜನಗಣತಿಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಪ್ರಧಾನಿ ಮನವಿ ಮಾಡಿದರು. ಇದುವರೆಗೆ 12 ದಶಲಕ್ಷ ಮನೆಗಳ ಪಟ್ಟಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಆನ್ಲೈನ್ ಮೂಲಕ ಸ್ವಯಂ ಅರ್ಜಿಗಳನ್ನು ಭರ್ತಿ ಮಾಡುವ ವ್ಯವಸ್ಥೆಯೂ ಲಭ್ಯವಿದೆ ಎಂದರು.
ಆರ್ಕೈವ್ಸ್ ಡಿಜಿಟಲೀಕರಣ, ಸಂಸ್ಕೃತಿ ಪ್ರಚಾರ
ದೇಶದ ಪರಂಪರೆಯನ್ನು ಅರಿಯಲು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಕೈಗೊಂಡಿರುವ ಡಿಜಿಟಲೀಕರಣ ಕಾರ್ಯವನ್ನು ಮೋದಿ ಪ್ರಶಂಸಿಸಿದರು. ಸುಮಾರು 200 ದಶಲಕ್ಷ ದಾಖಲೆಗಳನ್ನು ಡಿಜಿಟಲೀಕರಿಸಲಾಗಿದೆ ಎಂದು ಹೇಳಿದರು.
ಸಂಸ್ಕೃತಿ, ವನ್ಯಜೀವಿ, ಈಶಾನ್ಯ ಅಭಿವೃದ್ಧಿಗೆ ಒತ್ತು
ಭಗವಾನ್ ಬುದ್ಧರ ಸಂದೇಶದ ಪ್ರಸ್ತುತತೆಯನ್ನು ಉಲ್ಲೇಖಿಸಿದ ಪ್ರಧಾನಿ, ವನ್ಯಜೀವಿ ಸಂರಕ್ಷಣೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಪ್ರಸ್ತಾಪಿಸಿದರು. ಗ್ರೇಟ್ ಇಂಡಿಯನ್ ಬಾಸ್ಟರ್ಡ್ ಸೇರಿದಂತೆ ಅಪರೂಪದ ಜೀವಿಗಳ ಸಂರಕ್ಷಣೆಯ ಉದಾಹರಣೆಗಳನ್ನು ನೀಡಿದರು.
ಬಿದಿರನ್ನು ಮರಗಳ ವ್ಯಾಖ್ಯಾನದಿಂದ ತೆಗೆದುಹಾಕಿದ ಸರ್ಕಾರದ ನಿರ್ಧಾರವು ಈಶಾನ್ಯ ರಾಜ್ಯಗಳ ಜನಜೀವನದಲ್ಲಿ ಬದಲಾವಣೆ ತಂದಿದೆ ಎಂದು ಹೇಳಿದರು. ಅಲ್ಲಿನ ಬಿದಿರು ಉತ್ಪನ್ನಗಳನ್ನು ಖರೀದಿಸಲು ಜನರಿಗೆ ಕರೆ ನೀಡಿದರು.
ಅಂತಾರಾಷ್ಟ್ರೀಯ ಸಾಧನೆಗಳು, ಭಾರತೀಯ ಪಾಕಶೈಲಿ ಪ್ರಸಾರ
ಯುರೋಪಿಯನ್ ಗರ್ಲ್ಸ್ ಮ್ಯಾಥಮೆಟಿಕಲ್ ಒಲಿಂಪಿಯಾಡ್ನಲ್ಲಿ ಭಾರತೀಯ ತಂಡದ ಉತ್ತಮ ಪ್ರದರ್ಶನವನ್ನು ಮೋದಿ ಶ್ಲಾಘಿಸಿದರು. ಜೊತೆಗೆ, ಭಾರತೀಯ ಪಾಕಪದ್ಧತಿಯ ಜಾಗತಿಕ ಬೇಡಿಕೆ ಮತ್ತು ಹೂಡಿಕೆಗಳ ಹೆಚ್ಚಳದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa