
ಗದಗ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕಳೆದ ಹಲವು ವರ್ಷಗಳಿಂದ ತನ್ನ ವಿಶೇಷತೆಗಳಿಂದ ತನ್ನ ಹಿರಿಮೆ ಹೆಚ್ಚಿಸುತ್ತ ಮಾದರಿಯಾಗುವಲ್ಲಿ ಕೆಲಸ ಮಾಡುತ್ತಿರುವ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಇದೀಗ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗಿನ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾಥ್ ಲ್ಯಾಬ್ನಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಾನ್ಸ್ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ಇಂಪ್ಲಾಂಟೇಶನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಮೂಲಕ ಜಯದೇವ ಆಸ್ಪತ್ರೆ ಹೊರತುಪಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗದಗ ಪಾತ್ರವಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ 22-25 ಲಕ್ಷ ರೂ. ವೆಚ್ಚ ತಗುಲಬಹುದಾದ ಹೃದಯ ಶಸ್ತ್ರಚಿಕಿತ್ಸೆಯನ್ನು ಜಿಲ್ಲೆಯ ನರಗುಂದ ತಾಲೂಕಿನ 68 ವರ್ಷದ ರಮೇಶ ಮುರಡಿ ಅವರು ಎಸ್ಸಿಪಿ-ಟಿಎಸ್ಪಿ ಅನುದಾನದಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕೆಎಚ್ಪಿಐಎಂಎಸ್ ನಿರ್ದೇಶಕ ಡಾ| ಬಸವರಾಜ ಬೊಮ್ಮನಹಳ್ಳಿ ಮಾರ್ಗದರ್ಶನದಡಿ ಹೃದ್ರೋಗ ತಜ್ಞರಾದ ಡಾ: ಸಂಜೀವ್ ಚಿಂತಾಮನಿ ಸಹಕಾರದಲ್ಲಿ ಬೆಂಗಳೂರಿನ ತಜ್ಞ ವೈದ್ಯ ಡಾ| ವಿಕ್ರಮ ಪಾಟೀಲ ನೇತೃತ್ವದ ವೈದ್ಯಕೀಯ ತಂಡ 68 ವರ್ಷದ ವ್ಯಕ್ತಿಗೆ ಸಂಕೀರ್ಣವಾದ ‘ಹೈಬ್ರಿಡ್ ವಿಧಾನದ ಮೂಲಕ ಯಶಸ್ವಿ ಹೃದಯ ಮಹಾಪಧಮನಿಯ ಕವಾಟ ಬದಲಾವಣೆ ಮಾಡಲಾಗಿದೆ.
ಜಯದೇವ ಆಸ್ಪತ್ರೆ ಹೊರತುಪಡಿಸಿ ಇದು ರಾಜ್ಯದಲ್ಲೇ ಸರಕಾರಿ ಆಸ್ಪತ್ರೆ ಹಾಗೂ ಇತರೆ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕ್ಯಾಥ್ ಲ್ಯಾಬ್ವೊಂದರಲ್ಲಿ ನಡೆಸಿದ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕ್ಯಾಥ್ ಲ್ಯಾಬ್ ಪ್ರಾರಂಭವಾದ ವರ್ಷದೊಳಗೆ 543ಕ್ಕೂ ಹೆಚ್ಚು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆ ಪೈಕಿ 272ಕ್ಕೂ ಹೆಚ್ಚು ಆಂಜಿಯೀಪ್ಲಾಸ್ಟಿ (ಸ್ಟಂಟ್ ಅಳವಡಿಕೆ), 494ಕ್ಕೂ ಹೆಚ್ಚು ಆಂಜಿಯೋಗ್ರಾಫಿ, 13 ಪೇಸ್ ಮೇಕರ್ (ಕೃತಕ ಹೃದಯ ಮಿಡಿತ ಸಾಧನ ಅಳವಡಿಕೆ), 1 ಸಿಆರ್ಟಿ-ಡಿ, 1 ಎಸ್ಎಸ್ಡಿ ಡಿವೈಸ್ ಕ್ಲೋಸರ್ ಹಾಗೂ 2 ಐವಿಐ ಚಿಕಿತ್ಸೆ ನೀಡಲಾಗಿದೆ. ಸದ್ಯ ಈಗ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಹೃದ್ರೋಗ ತಜ್ಞ ಡಾ. ವಿಕ್ರಂ ಪಾಟೀಲ ಮಾತನಾಡಿ, ಇದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ, ತೊಡೆಯ ಸಂದಿನ ಮೂಲಕ ಕ್ಯಾತಿಟರ್ ಬಳಸಿ ಹೃದಯದ ಕವಾಟ ಬದಲಾಯಿಸುವ ಅತ್ಯಾಧುನಿಕ ಚಿಕಿತ್ಸಾ ವಿಧಾನವಾಗಿದೆ ಎಂದು ಚಿಕಿತ್ಸೆ ವಿಧಾನದ ಕುರಿತು ವಿವರಿಸಿದರು.
ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ: ಬಸವರಾಜ ಬೊಮ್ಮನಹಳ್ಳಿ, ಡಾ. ಸಂಜೀವ್ ಚಿಂತಾಮಣಿ, ಡಾ. ವಿನಾಯಕ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಎಡಿಸಿ ಡಾ. ದುರುಗೇಶ್ ಕೆ.ಆರ್. ಸೇರಿ ಹಲವರು ಇದ್ದರು.
ಗದಗದಲ್ಲಿ ಕ್ಯಾಥಲ್ಯಾಬ್ ಇಲ್ಲದ ಸಮಯದಲ್ಲಿ ಹೃದ್ರೋಗಿಗಳನ್ನು ಬೆಂಗಳೂರು, ಹುಬ್ಬಳ್ಳಿಗೆ ಕಳುಹಿಸಬೇಕಾದ ಅನಿವಾರ್ಯವಿತ್ತು. ಗದಗದಲ್ಲಿ ಕ್ಯಾಥಲ್ಯಾಬ್ ಆರಂಭವಾಗಿ ವರ್ಷದೊಳಗಾಗಿ 543ಕ್ಕೂ ಅಧಿಕ ಹೃದಯ ಕಾಯಿಲೆ ಪ್ರಕರಣಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದ್ದು, ತಂತ್ರಜ್ಞಾನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ 22ರಿಂದ 25 ಲಕ್ಷ ರೂ. ವರೆಗೆ ಖರ್ಚಾಗುತ್ತದೆ. ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನದಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 5 ರಿಂದ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 24 ಗಂಟೆಯೊಳಗೆ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಜ್ಞ ವೈದ್ಯ ಡಾ. ವಿಕ್ರಂ ಪಾಟೀಲ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP