
ಬಾಗಲಕೋಟೆ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬದಾಮಿ ಪಟ್ಟಣದಲ್ಲಿ ಬಸವ ಜಯಂತಿಯ ಅಂಗವಾಗಿ ನಗರದಲ್ಲಿನ ಎಸ್.ಎಸ್.ಬಿ.ಎಂ. ಕಾಲೇಜಿನ ಸ್ಪರ್ಧಾ ಶಕ್ತಿ ಕೇಂದ್ರದಲ್ಲಿ ಹೊಳೆಆಲೂರಿನ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯ ವತಿಯಿಂದ ಬಸವ ಕಾವ್ಯ ಸಮ್ಮೇಳನ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಭಕ್ತಿಭಾವದಿಂದ ಮತ್ತು ಸಾಹಿತ್ಯ ಸೊಬಗಿನಿಂದ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಾಹಾಂತೇಶ ಮಮದಾಪೂರ ಅವರು, “ಬಸವಣ್ಣನವರು ಸಾರಿದ ‘ಕಾಯಕವೇ ಕೈಲಾಸ’ ಎಂಬ ತತ್ವವು ಶ್ರಮದ ಮಹತ್ವವನ್ನು ಪ್ರತಿಪಾದಿಸುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯವನ್ನೂ ಪೂಜೆಯಂತೆ ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ” ಎಂದು ಹೇಳಿದರು. ಬಸವ ಜಯಂತಿಯ ಪವಿತ್ರ ಸಂದರ್ಭದಲ್ಲಿ ಸಮಾಜ ಸೇವಕರಿಗೆ ಕಾಯಕಜೀವಿ ಆದರ್ಶ ದಂಪತಿ, ಬಸವರತ್ನ ಹಾಗೂ ಬಸವ ಮಹಿಳಾ ರತ್ನ ಪ್ರಶಸ್ತಿಗಳನ್ನು ನೀಡುತ್ತಿರುವುದು ಇತರರಿಗೆ ಪ್ರೇರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನವಗ್ರಹ ಹಿರೇಮಠದ ಪೂಜ್ಯ ಶ್ರೀ ಷ.ಬ್ರ. ಶಿವಪೂಜಾ ಶಿವಸಚ್ಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವ ತತ್ವಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.
ಬಸವ ಕಾವ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಶರಣಮ್ಮ ಗದ್ದಗಿಮಠ ಮಾತನಾಡಿ, “ಬಸವ ಕಾವ್ಯ ಸಮ್ಮೇಳನವೆಂಬುದು ಕೇವಲ ಸಾಹಿತ್ಯ ಕಾರ್ಯಕ್ರಮವಲ್ಲ, ಅದು ಚಿಂತನೆಯ ಹಬ್ಬವಾಗಿದೆ.
ಬಸವಣ್ಣನವರ ವಚನಗಳು ಸಮಾಜ ಪರಿವರ್ತನೆಗೆ ದಾರಿದೀಪವಾಗಿವೆ. ಕಾವ್ಯದ ಮೂಲಕ ಸಮಾನತೆ, ಸತ್ಯ ಮತ್ತು ಶ್ರಮದ ಮೌಲ್ಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಹೊಣೆಗಾರಿಕೆ” ಎಂದು ಅಭಿಪ್ರಾಯಪಟ್ಟರು. ಇಂತಹ ಸಮ್ಮೇಳನಗಳು ಯುವ ಪೀಳಿಗೆಗೆ ದಿಕ್ಕು ತೋರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಶೋಭಾ ಎಸ್. ಆಡಿನ ವಹಿಸಿದ್ದರು. ಎಸ್.ಎಸ್.ಬಿ.ಎಂ. ಕಾಲೇಜಿನ ಮೇಲ್ವಿಚಾರಣಾ ಸಮಿತಿ ನಿರ್ದೇಶಕಿ ಶಾರದಾ ಹೆಚ್. ಮೇಟಿ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಚಿನ್ನು ಬ್ಯಾಂಕ್ ಅಧ್ಯಕ್ಷ ಶೇಖರಗೌಡ ಪಾಟೀಲ, ಪ್ರಾಚಾರ್ಯ ಡಾ. ಎ.ಎ. ತೋಪಕಟ್ಟಿ, ರೋಣ ಸಿಪಿಐ ವಿಜಯಕುಮಾರ ನಾಯಕ, ನಿಂಗಪ್ಪ ನವಲಗುಂದ, ಭೀಮರಡ್ಡೆಪ್ಪ ರಡ್ಡೇರ, ಬಸವರಾಜ ತಳವಾರ, ಪ್ರೊ. ಎಸ್.ಎಸ್. ಮೂಲಿಮನಿ ಹಾಗೂ ಶಾಂತಾ ಹಿರೇಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎಸ್.ಕೆ. ಆಡಿನ ಅವರು ಸ್ವಾಗತಿಸಿದರು. ಡಾ. ಎಸ್.ಎಸ್. ತಿಪ್ಪಶಟ್ಟಿ, ವೀರಣ್ಣ ಕಮ್ಮಾರ, ಎಸ್.ಎನ್. ಯಲಿಗಾರ, ರಮೇಶ ವಕ್ಕರ, ಭೀಮಪ್ಪ ಮಾದರ, ಭೀಮಪ್ಪ ಕದರಳ್ಳಿ, ಡಾ. ಜಯಂತ್ ಕುಮಾರ, ಗವಿಸಿದ್ದಯ್ಯ ಹಳ್ಳಿಕೇರಿಮಠ ಸೇರಿದಂತೆ ಅನೇಕ ಗಣ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande