
ಗದಗ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಗರ ವ್ಯಾಪ್ತಿಯಲ್ಲೇ ಇದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ, ಕುಗ್ರಾಮದಿಗಿಂತಲೂ ಹೀನ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಜನರ ವಾಸ್ತವ ಸ್ಥಿತಿ ಗದಗ-ಬೆಟಗೇರಿ ಅವಳಿ ನಗರದ 16ನೇ ವಾರ್ಡ್ನ ಹೊಂಬಳ ನಾಕಾ ಜನತಾ ಕಾಲೋನಿಯಲ್ಲಿ ಕಂಡು ಬಂದಿದೆ. ಕಳೆದ 40 ವರ್ಷಗಳಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ, ಭದ್ರ ಸಂಚಾರ ವ್ಯವಸ್ಥೆ ಸೇರಿದಂತೆ ಅನೇಕ ಅಗತ್ಯ ಸೌಲಭ್ಯಗಳಿಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.
ರಾಜ ಕಾಲುವೆ ಕಾಟ: ಮಳೆ ಬಂದರೆ ಮನೆಗಳಿಗೆ ನೀರು, ಈ ಪ್ರದೇಶದ ದೊಡ್ಡ ಸಮಸ್ಯೆಯಾಗಿ ರಾಜ ಕಾಲುವೆ ಪರಿಣಮಿಸಿದೆ. ಗದಗ ನಗರದ ಸುಮಾರು 75 ಶೇಕಡಾ ನೀರು ಈ ಕಾಲುವೆ ಮೂಲಕ ಹರಿದು ಬರುತ್ತಿದ್ದು, ಮಳೆಗಾಲದಲ್ಲಿ ಸ್ವಲ್ಪ ಹೆಚ್ಚು ಮಳೆಯಾದರೂ ಸಾಕು ಕಾಲುವೆ ತುಂಬಿ ಹರಿದು ಬಡಾವಣೆಗಳಿಗೆ ನುಗ್ಗುತ್ತದೆ. ಇದರಿಂದ ಮನೆಗಳಿಗೆ ನೀರು ನುಗ್ಗಿ, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ಇನ್ನೂ ಕಾಲುವೆಯ ತಡೆಗೋಡೆ ಹಲವೆಡೆ ಒಡೆದು ಹೋಗಿದ್ದು, ಅಪಾಯದ ಗಂಟೆ ಹೊಡೆಯುತ್ತಿದೆ. ತಕ್ಷಣ ದುರಸ್ತಿ ಮಾಡದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸೇತುವೆ ಇಲ್ಲದೆ ಜೀವಪಣದ ಸಂಚಾರ, ಕಾಲುವೆ ದಾಟಲು ಹಿಂದೊಮ್ಮೆ ನಿರ್ಮಿಸಿದ್ದ ಚಿಕ್ಕ ಸೇತುವೆ ಈಗ ಸಂಪೂರ್ಣ ಹಾಳಾಗಿದೆ. ಪರಿಣಾಮವಾಗಿ ಜನರು ಮೂರು ವಿದ್ಯುತ್ ಕಂಬಗಳನ್ನು ಹಾಕಿ ತಾತ್ಕಾಲಿಕ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಕಂಬಗಳ ಮೇಲೆ ಮಹಿಳೆಯರು, ಮಕ್ಕಳು, ವೃದ್ಧರು ಜೀವದ ಭಯದಲ್ಲೇ ನಿತ್ಯ ಓಡಾಡುತ್ತಿದ್ದಾರೆ. ಸ್ವಲ್ಪ ತಪ್ಪಿದರೂ ಅಪಾಯ ಅನಿವಾರ್ಯ ಎನ್ನುವ ಪರಿಸ್ಥಿತಿ ಇದೆ.
ರಸ್ತೆ, ಒಳಚರಂಡಿ ಸಮಸ್ಯೆ: ಬಯಲು ಶೌಚಕ್ಕೆ ಮರಳಿದ ಜನರು, ಜನತಾ ಕಾಲೋನಿಯಲ್ಲಿ ಸರಿಯಾದ ರಸ್ತೆ ವ್ಯವಸ್ಥೆಯೇ ಇಲ್ಲ. ಇರುವ ರಸ್ತೆಗಳೂ ಸಂಪೂರ್ಣ ಹಾಳಾಗಿ ಸಂಚಾರಕ್ಕೆ ಅಸಾಧ್ಯವಾಗಿದೆ. ಒಳಚರಂಡಿ ವ್ಯವಸ್ಥೆ ಇದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಮಳೆ ನೀರು, ಕಸ ನೀರು ಎಲ್ಲವೂ ರಸ್ತೆಗಳಲ್ಲೇ ಹರಿದು ಅಸ್ವಚ್ಛ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ ಕೆಲವರು ಬಯಲು ಶೌಚಕ್ಕೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದು, ಆರೋಗ್ಯ ಸಮಸ್ಯೆಗಳ ಆತಂಕವೂ ಹೆಚ್ಚಾಗಿದೆ.
ಆಂಬುಲೆನ್ಸ್ ಕೂಡ ಬರೋದಿಲ್ಲ
ಪ್ರದೇಶದ ರಸ್ತೆ ಕಿರಿದಾಗಿದ್ದು, ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗಳು ಈ ಪ್ರದೇಶಕ್ಕೆ ತಲುಪುವುದು ಕಷ್ಟವಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ರೋಗಿಗಳನ್ನು ಮುಖ್ಯ ರಸ್ತೆಯವರೆಗೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಇದು ಜೀವ ಹಾನಿಗೂ ಕಾರಣವಾಗಬಹುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ: 24x7 ಯೋಜನೆ ಕಾಗದದಲ್ಲೇ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದ್ದರೂ, ಈ ಪ್ರದೇಶಕ್ಕೆ ಮಾತ್ರ ಅದರ ಪ್ರಯೋಜನ ಸಿಗುತ್ತಿಲ್ಲ. ನಿತ್ಯ ನೀರಿಗಾಗಿ ಜನರು ಪರದಾಡಬೇಕಾದ ಪರಿಸ್ಥಿತಿ ಇದೆ. ಇದು ನಗರದಲ್ಲೇ ಅತ್ಯಂತ ನಿರ್ಲಕ್ಷಿತ ಪ್ರದೇಶ ಎಂಬುದಕ್ಕೆ ಸಾಕ್ಷಿಯಾಗಿದೆ.
ಚುನಾವಣೆ ವೇಳೆ ಮಾತ್ರ ನೆನಪು
“ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಮನೆ ಮನೆಗೆ ಬಂದು ಮತ ಕೇಳುತ್ತಾರೆ. ನಂತರ ನಮ್ಮ ಸಮಸ್ಯೆಗಳನ್ನು ಯಾರು ಕೇಳೋದಿಲ್ಲ” ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಸಚಿವರು ಅನುದಾನ ಬಿಡುಗಡೆ ಮಾಡುತ್ತಿದ್ದರೂ, ನೆಲಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆಯನ್ನು ಜನರು ಎತ್ತಿದ್ದಾರೆ.
ಸ್ಥಳೀಯ ನಿವಾಸಿ ಕೃಷ್ಣಾ ಹಡಪದ ಸೇರಿದಂತೆ ಹಲವರು “40 ವರ್ಷಗಳಿಂದ ಇದೇ ಸಮಸ್ಯೆ. ಇನ್ನೂ ಎಷ್ಟು ಕಾಲ ನಾವು ಹೀಗೆ ಬದುಕಬೇಕು?” ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲೇ ಕುಗ್ರಾಮದ ಸ್ಥಿತಿ
ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಈ ಪ್ರದೇಶದ ಸ್ಥಿತಿ ನೋಡಿದರೆ, ಇದು ನಗರವಲ್ಲದೆ ದೂರದ ಕುಗ್ರಾಮ ಎಂಬ ಭಾವನೆ ಮೂಡುತ್ತದೆ. ಮೂಲ ಸೌಕರ್ಯಗಳ ಕೊರತೆಯಿಂದ ಜನರು ದಿನನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.
ತಕ್ಷಣ ಕ್ರಮಕ್ಕೆ ಒತ್ತಾಯ
ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಕ್ಷಣ ಈ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ರಾಜ ಕಾಲುವೆ ದುರಸ್ತಿ, ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ಸುಧಾರಣೆ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಜನರ ಬದುಕಿಗೆ ನೆಮ್ಮದಿ ತರಬೇಕಾಗಿದೆ.
ಒಟ್ಟಾರೆ, ನಾಲ್ಕು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಜನತಾ ಕಾಲೋನಿ ನಿವಾಸಿಗಳು ಮೂಲಭೂತ ಸೌಲಭ್ಯಗಳಿಗಾಗಿ ಇನ್ನೂ ಹೋರಾಟ ನಡೆಸುತ್ತಿದ್ದು, ಅಧಿಕಾರಿಗಳ ತಕ್ಷಣದ ಸ್ಪಂದನೆಗಾಗಿ ಕಾಯುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP