
ತುಮಕೂರು, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತುಮಕೂರಿನಲ್ಲಿ ಎರಡು ಪಾದಚಾರಿ ಸುರಂಗ ಮಾರ್ಗಗಳ (ಸಬ್ವೇ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಕ್ಯಾತ್ಸಂದ್ರ ಮತ್ತು ತುಮಕೂರು ರೈಲು ನಿಲ್ದಾಣಗಳ ನಡುವೆ ಮಾರುತಿನಗರದಲ್ಲಿ ಹಾಗೂ ಕ್ಯಾತ್ಸಂದ್ರ ನಿಲ್ದಾಣದ ಬಳಿಯ ಹಳೆಯ ಲೆವೆಲ್ ಕ್ರಾಸಿಂಗ್ ಸಂಖ್ಯೆ 36ರ ಬಳಿ ಈ ಸಬ್ವೇಗಳು ನಿರ್ಮಾಣಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಯೋಜನೆಗಳಿಂದ ಪಾದಚಾರಿಗಳಿಗೆ ರೈಲು ಹಳಿಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗುವುದರ ಜೊತೆಗೆ ಅನಧಿಕೃತ ಪ್ರವೇಶ ತಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕ್ಯಾತ್ಸಂದ್ರ ಸಮೀಪದ ಸಬ್ವೇ ಸುಮಾರು ₹5.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಮಾರುತಿನಗರದ ಸಬ್ವೇಗೆ ಸುಮಾರು ₹3.4 ಕೋಟಿ ವೆಚ್ಚವಾಗಲಿದೆ. ಎರಡೂ ಕಾಮಗಾರಿಗಳು ಜನವರಿ 2027ರೊಳಗೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಇದೇ ವೇಳೆ, ಯಲಹಂಕದಲ್ಲಿ ಹೊಸ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ತುಮಕೂರಿನ ತಿಮ್ಮರಾಜನಹಳ್ಳಿಯಲ್ಲಿ ಇಂಟಿಗ್ರೇಟೆಡ್ ಕಂಟೇನರ್ ಲಾಜಿಸ್ಟಿಕ್ಸ್ ಟರ್ಮಿನಲ್ ನಿರ್ಮಾಣದಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು–ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಯೋಜನೆಯ ಜೊತೆಗೆ, ಯಲಹಂಕ–ಯಶವಂತಪುರ–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ಹೊಸ ಮೆಮು ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು.
ರಾಯದುರ್ಗ–ತುಮಕೂರು (207 ಕಿಮೀ) ಹೊಸ ರೈಲು ಮಾರ್ಗ ಯೋಜನೆ ಡಿಸೆಂಬರ್ 2027ರೊಳಗೆ ಪೂರ್ಣಗೊಳ್ಳಲಿದ್ದು, ತುಮಕೂರು–ದಾವಣಗೆರೆ–ಚಿತ್ರದುರ್ಗ ರೈಲು ಯೋಜನೆಯೂ ವೇಗವಾಗಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಶಾಸಕ ಬಿ. ಸುರೇಶ್ ಗೌಡ ಹಾಗೂ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪ್ರವೀಣ್ ಕಾತರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa