


ಶಹಪೂರ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ತಾಲೂಕಿನ ಶಹಪೂರ ಗ್ರಾಮದ ಆರಾಧ್ಯ ದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಮೂರ್ತಿ, ಶ್ರೀ ಗಣೇಶ ಹಾಗೂ ಶ್ರೀ ನಂದಿ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಇದೇ ಏ.೨೭ರಿಂದ ಮೂರು ದಿನಗಳ ಕಾಲ ಜರುಗಲಿದೆ.
ಸ್ವಸ್ತಿ ಶ್ರೀಮನೃಪ ಶಾಲಿವಾಹನ ಶಕೆ ೧೯೪೮ ನೇ ಪರಾಭವನಾಮ ಸಂವತ್ಸರ ವೈಶಾಖ ಶುದ್ಧ ಏಕಾದಶಿ, ದ್ವಾದಶಿ, ತ್ರಯೋದಶಿ ದಿನಾಂಕ: ೨೭, ೨೮ ಮತ್ತು ೨೯ ರಂದು ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದ್ದು, ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಸುಕ್ಷೇತ್ರ ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಸುಕ್ಷೇತ್ರ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಪೂಜ್ಯ ಶ್ರೀ ಭುವನೇಶ್ವರ ತಾತನವರು, ನಗರಗಡ್ಡಿಮಠದ ಶ್ರೀ ಶಾಂತಲಿ0ಗೇಶ್ವರ ಮಹಾಸ್ವಾಮಿಗಳು ಮತ್ತು ಮೈನಳ್ಳಿ ಉಜ್ಜಯಿನಿ ಶಾಖಾ ಮಠದ ಶ್ರೀ ಷ.ಬ್ರ.೧೦೮ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮೊದಲ ದಿನ ಸೋಮವಾರ ಬೆಳಿಗ್ಗೆ ೯ ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು, ಶ್ರೀ ಗಣಪತಿ ಹಾಗೂ ಶ್ರೀ ನಂದಿಯ ಮೂರ್ತಿಗಳೊಂದಿಗೆ ಪೂರ್ಣ ಕುಂಭ ಹಾಗೂ ಕಳಸದೊಂದಿಗೆ ಅದ್ದೂರಿ ಮೆರವಣಿಗೆ ಜರುಗಲಿದೆ. ಪೂರ್ಣ ಕುಂಭ ಸ್ವಾಗತ, ಜಲಾದಿವಾಸ, ಕ್ಷೀರಾದಿವಾಸ, ಪುಷ್ಪಾದಿವಾಸ ನೆರವೇರಿಸಲಾಗುತ್ತದೆ. ಏ. ೨೮ರಂದು ಮಂಗಳವಾರ ಬೆಳಿಗ್ಗೆ ೯ ಗಂಟೆಗೆ ನವಗ್ರಹ ಸ್ಥಾಪನೆ, ಧಾನ್ಯಾದಿವಾಸ, ನವಗ್ರಹ ಹೋಮ, ಗಣಹೋಮ, ಮೃತ್ಯುಂಜಯ ಹೋಮ, ಗ್ರಾಮದ ಒಳಿತಿಗಾಗಿ ಶ್ರೀ ದುರ್ಗಾಪರಮೇಶ್ವರಿ ಹೋಮ ಹಾಗೂ ನಿದ್ರಾದಿವಾಸಗಳನ್ನು ನೆರವೇರಿಸಲಾಗುತ್ತದೆ.
ವಿಪ್ರವರೇಣ್ಯರಾದ ಶ್ರೀ ವಿನಾಯಕ ಭಟ್ಟ ಅಗ್ನಿಹೋತ್ರಿ ಇವರ ನೇತೃತ್ವದಲ್ಲಿ ಈ ಎಲ್ಲ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಏ. ೨೯ರ ಬುಧವಾರ ಬೆಳಿಗ್ಗೆ ೭.೩೫ ರಿಂದ ೯.೧೧ ರ ವರಗೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಕಳಾಕರ್ಷಣ ಹೋಮ, ಜೀವಾಕರ್ಷಣ ಹೋಮ ನೆರವೇರಿಸಲಾಗುತ್ತದೆ. ಬೆಳಿಗ್ಗೆ ೧೧.೩೦ ಕ್ಕೆ ಮಹಾ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಡೆಯಲಿವೆ. ಮೂರು ದಿನಗಳ ಕಾಲ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆಯೂ ಇದೆ.
ಹೊಸಪೇಟೆಯ ಪ್ರಾರ್ಥನಾ ಟೆಕ್ಸ್ಟೈಲ್ಸ್ ನ ಭಕ್ತರು ಶ್ರೀ ದುರ್ಗಾ ಪರಮೇಶ್ವರಿಯ ಮೂರ್ತಿಯನ್ನು ಸಮರ್ಪಿಸಿದ್ದು, ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಗಣಪತಿ ಹಾಗೂ ಶ್ರೀ ನಂದಿ ದೇವರುಗಳ ಕೃಪೆಗೆ ಪಾತ್ರರಾಗುವಂತೆ ಶಹುರ ಗ್ರಾಮದ ಸಮಸ್ತ ದೈವ ಮಂಡಳಿಯವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್