
ಕೋಲಾರ, ೨೫ ಏಪ್ರಿಲ್ (ಹಿ.ಸ) :
ಆ್ಯಂಕರ್ : ಬಂಗಾರಪೇಟೆ ಪಟ್ಟಣದ ಮಾರ್ಸ್ ಇಂಟರ್ನ್ಯಾಷನಲ್ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎರಡನೇ ಭಾರಿಯೂ ಸಹ ಅತ್ಯುತ್ತಮ ಸಾಧನೆ ಮಾಡಿದೆ. ಈ ಬಾರಿ ಕೂಡ ಶೇ.೧೦೦ ಫಲಿತಾಂಶ ಲಭಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿಯ ಫಲಿತಾಂಶವನ್ನು ಸಾಧಿಸುತ್ತಿರುವುದು ಶಾಲೆಯ ಶಿಕ್ಷಣದ ಗುಣಮಟ್ಟ ಹಾಗೂ ವ್ಯವಸ್ಥಿತ ಕಲಿಕಾ ವಿಧಾನಗಳಿಗೆ ಸಾಕ್ಷಿಯಾಗಿದೆ ಎಂದು ಕಾರ್ಯದರ್ಶಿ ಮಂಜುನಾಥ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೊರವಲಯದ ದೇಶಹಳ್ಳಿ ಸಮೀಪದಲ್ಲಿರುವ ಮಾರ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರದಿಂದ ಈ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸಹನ.ಹೆಚ್, ಭಾನುಪ್ರಿಯ.ಕೆ ಇವರು ಉತ್ತಮ ಶ್ರೇಣಿಯಲ್ಲಿ ಹಾಗೂ ಪೃಥ್ವಿರಾಜ್.ಎಂ ಮತ್ತು ಭರತ್ಗೌಡ.ಎನ್ ರವರು ಮೊದಲನೇ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ನಮ್ಮ ಶಿಕ್ಷಣದ ಗುಣಮಟ್ಟಕ್ಕೆ ದೊರೆತ ಮಾನ್ಯತೆ ಎಂದು ಹೇಳಿದರು.
ಶಾಲೆಯಲ್ಲಿ ನುರಿತ ಮತ್ತು ಅನುಭವಸ್ತ ಶಿಕ್ಷಕರ ತಂಡವು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ತಕ್ಕಂತೆ ವೈಯಕ್ತಿಕ ಗಮನ ನೀಡಿ ತರಬೇತಿ ನೀಡುವುದು ಈ ಶಾಲೆಯ ವಿಶೇಷತೆಯಾಗಿದೆ. ಮಕ್ಕಳಿಗೆ ಕೇವಲ ಪಾಠ್ಯಪುಸ್ತಕದ ಜ್ಞಾನವಷ್ಟೇ ಅಲ್ಲ, ಜೀವನಪಾಠಗಳನ್ನು ಕಲಿಸುವತ್ತ ಕೂಡ ಶಿಕ್ಷಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಕಾರ್ಯಕ್ರಮಗಳು, ಮಾದರಿ ಪರೀಕ್ಷೆಗಳು ಮತ್ತು ವಿಷಯವಾರು ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ಈ ಕ್ರಮಗಳಿಂದ ವಿದ್ಯಾರ್ಥಿಗಳು ತಮ್ಮ ದೌರ್ಬಲ್ಯಗಳನ್ನು ಗುರುತಿಸಿಕೊಂಡು ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಪರೀಕ್ಷೆಯ ನಂತರ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಪ್ರಗತಿಯನ್ನು ವಿಶ್ಲೇಷಿಸುತ್ತಾರೆ.
ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ, ಶಾಲೆಯು ಅತ್ಯಧಿಕ ಅಂಕಗಳನ್ನು ಗಳಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಇದು ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣ ಹಾಗೂ ಶ್ರದ್ಧೆಯ ಪ್ರತಿಬಿಂಬವಾಗಿದೆ. ಪ್ರತಿ ವಿದ್ಯಾರ್ಥಿಯ ಮೇಲೂ ಶಿಕ್ಷಕರು ವಿಶೇಷ ನಿಗಾ ಇಟ್ಟು, ಅವರ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಾಸಕ್ಕೂ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಶಾಲೆಯಲ್ಲಿ ಆಧುನಿಕ ಸೌಲಭ್ಯಗಳ ಜೊತೆಗೆ, ಉತ್ತಮ ಕಲಿಕಾ ವಾತಾವರಣವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಒತ್ತಡವಿಲ್ಲದೆ ಕಲಿಯುವಂತೆ ವ್ಯವಸ್ಥೆ ಮಾಡಲಾಗಿದ್ದು, ಅವರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನೈತಿಕ ಮೌಲ್ಯಗಳ ಮೇಲೂ ಗಮನ ಹರಿಸಲಾಗುತ್ತಿದೆ.
ಪೋಷಕರ ಸಹಕಾರವೂ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶಾಲೆ ಮತ್ತು ಪೋಷಕರ ನಡುವಿನ ಸಮನ್ವಯದಿಂದ ವಿದ್ಯಾರ್ಥಿಗಳ ಮೇಲೆ ನಿರಂತರ ನಿಗಾ ಇಡುವುದು ಸಾಧ್ಯವಾಗಿದೆ. ಪೋಷಕರ ಸಭೆಗಳು ನಿಯಮಿತವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳ ಪ್ರಗತಿ ಕುರಿತು ಚರ್ಚಿಸಲಾಗುತ್ತದೆ. “ನಮ್ಮ ಶಾಲೆಯ ಉದ್ದೇಶ ಕೇವಲ ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸುವುದಲ್ಲ, ಉತ್ತಮ ನಾಗರಿಕರನ್ನು ರೂಪಿಸುವುದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಾವು ಬದ್ಧರಾಗಿದ್ದೇವೆ,” ಈ ಸಾಧನೆಯ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ನೀಡುವ ವಿಶ್ವಾಸವನ್ನು ಶಾಲಾ ಆಡಳಿತ ಮಂಡಳಿ ವ್ಯಕ್ತಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್