ಬಿಸಿಲು ಹೆಚ್ಚಳ ; ನೆರಳಿನ ವ್ಯವಸ್ಥೆ
ಗದಗ, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಣ ಭೀಕರ ಬಿಸಿಲು ಜನಜೀವನವನ್ನು ಕಂಗೆಡಿಸುತ್ತಿರುವ ನಡುವೆ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಬೈಕ್ ಸವಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ನಿರಾಳತೆಯನ್ನು ನೀಡಿದೆ. ಗದ
ಫೋಟೋ


ಗದಗ, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಣ ಭೀಕರ ಬಿಸಿಲು ಜನಜೀವನವನ್ನು ಕಂಗೆಡಿಸುತ್ತಿರುವ ನಡುವೆ, ಟ್ರಾಫಿಕ್ ಸಿಗ್ನಲ್ಗಳಲ್ಲಿ ಬೈಕ್ ಸವಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ನಿರಾಳತೆಯನ್ನು ನೀಡಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುತ್ತಿದ್ದು, ಬೆಳಗ್ಗೆ 11 ಗಂಟೆ ನಂತರ ಹೊರಗೆ ಸಂಚರಿಸುವುದೇ ಸವಾಲಿನ ವಿಷಯವಾಗಿದೆ.

ಬಿಸಿಲಿನ ತಾಪಕ್ಕೆ ಜನರು ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿರುವ ಸ್ಥಿತಿ ನಿರ್ಮಾಣವಾಗಿದ್ದು, ವಿಶೇಷವಾಗಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಲ್ಲಬೇಕಾದ ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಸಿಗ್ನಲ್ ಬಳಿ ಕನಿಷ್ಠ ಒಂದರಿಂದ ಮೂರು ನಿಮಿಷಗಳ ಕಾಲ ನಿಲ್ಲುವ ವೇಳೆ ತಲೆ ಮೇಲೆ ಹೊಡೆಯುವ ಬಿಸಿಲು, ಮುಖಕ್ಕೆ ತಟ್ಟುವ ಬಿಸಿ ಗಾಳಿ, ಹೆಲ್ಮೆಟ್ನೊಳಗಿನ ಬೆವರು ಸೇರಿ ಸವಾರರನ್ನು ಸುಸ್ತುಗೊಳಿಸುತ್ತಿತ್ತು. ಕೆಲ ಸಂದರ್ಭಗಳಲ್ಲಿ ಸಿಗ್ನಲ್ನಲ್ಲಿ ನಿಲ್ಲಲು ಸಾಧ್ಯವಾಗದೆ ಸವಾರರು ಸಿಗ್ನಲ್ ಜಂಪ್ ಮಾಡುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದ್ದರು.

ಈ ಸಮಸ್ಯೆಯನ್ನು ಮನಗಂಡ ಗದಗ ಪೊಲೀಸ್ ಇಲಾಖೆ, ನಗರಸಭೆಯ ಸಹಯೋಗದಲ್ಲಿ ಪ್ರಮುಖ ಟ್ರಾಫಿಕ್ ಜಂಕ್ಷನ್ಗಳಲ್ಲಿ ಹಸಿರು ಶೇಡ್ನೆಟ್ (ಗ್ರೀನ್ ಮ್ಯಾಟ್) ಅಳವಡಿಸಿ ನೆರಳಿನ ವ್ಯವಸ್ಥೆ ಮಾಡಿದೆ. ಹೆಚ್ಚು ವಾಹನ ಸಂಚಾರ ಇರುವ ಮುಳಗುಂದ ನಾಕಾ, ಪುಟ್ಟರಾಜ ಸರ್ಕಲ್ ಮತ್ತು ಭೂಮರೆಡ್ಡಿ ಸರ್ಕಲ್ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಮುಳಗುಂದ ನಾಕಾದ ಮೂಲಕ ಹಾದು ಹೋಗುವ ನಾಲ್ಕು ರಸ್ತೆಗಳಲ್ಲಿ ಸಹ ಶೇಡ್ಗಳನ್ನು ನಿರ್ಮಿಸಿ, ಸಿಗ್ನಲ್ನಲ್ಲಿ ನಿಲ್ಲುವ ಸವಾರರಿಗೆ ತಾತ್ಕಾಲಿಕ ರಿಲೀಫ್ ಒದಗಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು, “ಬೇಸಿಗೆಯ ತೀವ್ರ ಬಿಸಿಲಿನಿಂದ ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಲ್ಲುವ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ನಗರಸಭೆಯ ಸಹಯೋಗದಲ್ಲಿ ಪ್ರಮುಖ ಸಿಗ್ನಲ್ಗಳಲ್ಲಿ ಶೇಡ್ನೆಟ್ ಅಳವಡಿಸಲಾಗಿದೆ. ಇದರಿಂದ ಸವಾರರಿಗೆ ಸ್ವಲ್ಪ ಮಟ್ಟಿನ ಆರಾಮ ಸಿಗುವುದಲ್ಲದೆ, ಟ್ರಾಫಿಕ್ ನಿಯಮ ಪಾಲನೆಗೂ ಸಹಾಯಕವಾಗಲಿದೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಬೈಕ್ ಸವಾರರು ಕೂಡ ಪೊಲೀಸ್ ಇಲಾಖೆಯ ಈ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ. “ಸಿಗ್ನಲ್ನಲ್ಲಿ ನಿಲ್ಲುವಾಗ ಬಿಸಿಲು ತುಂಬಾ ಕಷ್ಟ ಕೊಡುತ್ತಿತ್ತು. ಈಗ ಗ್ರೀನ್ ಮ್ಯಾಟ್ ಅಳವಡಿಸಿರುವುದರಿಂದ ನೆರಳಿನಲ್ಲಿ ನಿಲ್ಲಲು ಸಾಧ್ಯವಾಗುತ್ತಿದೆ. ಇದರಿಂದ ಸ್ವಲ್ಪ ಮಟ್ಟಿಗೆ ತಂಪು ಅನುಭವವಾಗುತ್ತಿದೆ” ಎಂದು ಬೈಕ್ ಸವಾರ ಬಾಬು ಬಾಕಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಗದಗ ನಗರದಲ್ಲಿ ಹೆಚ್ಚುತ್ತಿರುವ ತಾಪಮಾನ ನಡುವೆಯೇ ಪೊಲೀಸ್ ಇಲಾಖೆ ಹಾಗೂ ನಗರಸಭೆಯ ಈ ಸಹಯೋಗದ ಕಾರ್ಯ ಸಾರ್ವಜನಿಕರಿಗೆ ನೆರವಾಗಿದ್ದು, ಸಿಗ್ನಲ್ನಲ್ಲಿ ಕೆಲ ನಿಮಿಷಗಳಾದರೂ ರಣ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ಈ ಉಪಕ್ರಮಕ್ಕೆ ಅವಳಿ ನಗರದ ಜನರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande