ವೀರಶೈವ ಲಿಂಗಾಯತ ಸಮಾಜದಿಂದ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಹೆಚ್ಚಲಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ವೀರಶೈವ ಲಿಂಗಾಯತ ಸಮಾಜದಿಂದ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಜಾಸ್ತಿಯಾಗಲಿ. ಹೆಚ್ಚು ಮಕ್ಕಳು ಐಎಎಸ್, ಐಪಿಎಸ್ ಹುದ್ದೆ ಅಲಂಕರಿಸಲಿ ಎಂಬುದೇ ನನ್ನ ಆಶಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
Program


ಬೆಂಗಳೂರು, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವೀರಶೈವ ಲಿಂಗಾಯತ ಸಮಾಜದಿಂದ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಜಾಸ್ತಿಯಾಗಲಿ. ಹೆಚ್ಚು ಮಕ್ಕಳು ಐಎಎಸ್, ಐಪಿಎಸ್ ಹುದ್ದೆ ಅಲಂಕರಿಸಲಿ ಎಂಬುದೇ ನನ್ನ ಆಶಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಡೆದ ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಮ್ಮ ಸಮಾಜದಲ್ಲಿ ಶಿಕ್ಷಣಕ್ಕೆ ಕೊರತೆಯಿಲ್ಲ, ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಜಾಸ್ತಿಯಾಗಬೇಕಿದೆ ಎಂದರು.

ನಮ್ಮ ಸಮಾಜದ ಮಹಿಳಾ ಘಟಕ ಉತ್ತಮ ಕೆಲಸ ಮಾಡುತ್ತಿದ್ದು, ನೂತನ ಅಧ್ಯಕ್ಷರಾದ ವೀಣಾ ಕಾಶಪ್ಪನವರ್ ರಾಜ್ಯಾದ್ಯಾಂತ ಸುತ್ತಾಡಿ ಸಮಾಜವನ್ನು ಸಂಘಟಿಸಲಿದ್ದಾರೆ ಎಂಬ ವಿಶ್ವಾಸವಿದೆ. ನೂತನ ಪದಾಧಿಕಾರಿಗಳು ಸಮಾಜವನ್ನು ಕಟ್ಟಿ, ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತ ಕೆಲಸ ಮಾಡಲಿ, ನಮ್ಮ ಸಮಾಜವನ್ನು ಒಗ್ಗೂಡಿಸಿ ಸಂಘಟಿಸುವ ಕೆಲಸ ಮಾಡಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾರೈಸಿದರು.

ಈ ವೇಳೆ ಶಿವಗಂಗಾದ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟದ ಶ್ರೀ ಡಾ॥ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಶ್ರೀರಂಗಪಟ್ಟಣ ಬೇಬಿಮಠದ ಡಾ| ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಸಚಿವರು ಆದ ಈಶ್ವರ್ ಖಂಡ್ರೆ, ರಾಜ್ಯ ಘಟಕದ ಅಧ್ಯಕ್ಷರಾದ ಶಂಕರ್ ಬಿದರಿ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ರಾಣಿ ಸತೀಶ್, ಶಾಸಕರಾದ ಬಸವರಾಜು ಶಿವಗಂಗಾ, ಚನ್ನರೆಡ್ಡಿ ಪಾಟೀಲ್, ವಿಜಯಾನಂದ ಕಾಶಪ್ಪನವರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷರಾದ ವೀಣಾ ಕಾಶಪ್ಪನವರ್, ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದ ವೆಂಕಟರೆಡ್ಡಿ ಪಾಟೀಲ್ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande