
ಬೆಂಗಳೂರು, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿ ಕುರಿತಾಗಿ ರಾಜ್ಯ ಸಚಿವ ಸಂಪುಟವು ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 5.25% ಹಾಗೂ ಇತರೆ (ಅಲೆಮಾರಿ ಸೇರಿದಂತೆ) ಸಮುದಾಯಗಳಿಗೆ 4.5% ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಸೂಚಿಸಿರುವ ಶೇ.50 ಮೀಸಲಾತಿ ಮಿತಿಯನ್ನು ಪಾಲಿಸುವ ನಿಟ್ಟಿನಲ್ಲಿ ಈ ಮರುನಿಗದಿ ಮಾಡಲಾಗಿದೆ ಎಂದರು. ಪರಿಶಿಷ್ಟ ಜಾತಿಗೆ ಒಟ್ಟು 15% ಹಾಗೂ ಪರಿಶಿಷ್ಟ ಪಂಗಡಗಳಿಗೆ 3% ಮೀಸಲಾತಿ ನೀಡುವ ಪ್ರಸ್ತುತ ಚೌಕಟ್ಟಿನೊಳಗೆ ಒಳಮೀಸಲಾತಿಯನ್ನು 5.25:5.25:4.5 ಪ್ರಮಾಣದಲ್ಲಿ ಹಂಚಲಾಗಿದೆ ಎಂದು ವಿವರಿಸಿದರು.
ಸಮಾನ ನ್ಯಾಯದ ಭರವಸೆ
ಈ ನಿರ್ಧಾರದಿಂದ ಪರಿಶಿಷ್ಟ ಜಾತಿಯ ಎಲ್ಲಾ ಉಪಸಮುದಾಯಗಳಿಗೆ ಸಮಾನ ಅವಕಾಶ ದೊರೆಯಲಿದ್ದು, ನೇಮಕಾತಿ ಪ್ರಕ್ರಿಯೆಗಳಲ್ಲಿ ಹೊಸ ಹಂಚಿಕೆ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಶೇ.6 ಹೆಚ್ಚುವರಿ ಮೀಸಲಾತಿಗೆ ಸಂಬಂಧಿಸಿದ ವಿಷಯವು ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ‘ಬ್ಯಾಕ್ಲಾಗ್’ ಆಗಿ ಪರಿಗಣಿಸಲಾಗುತ್ತದೆ ಎಂದರು.
ನ್ಯಾಯಾಲಯದ ಆದೇಶದ ಹಿನ್ನೆಲೆ
ಮೀಸಲಾತಿ ಶೇ.50 ಮೀರಬಾರದು ಎಂಬ ಇಂದಿರಾ ಸಹಾನಿ ಪ್ರಕರಣ ತೀರ್ಪನ್ನು ನ್ಯಾಯಾಲಯ ಪುನರುಚ್ಚರಿಸಿದ ಹಿನ್ನೆಲೆ, ಸರ್ಕಾರವು ತಾಂತ್ರಿಕ ಸಮಿತಿ ವರದಿ ಆಧರಿಸಿ ಹೊಸ ಪ್ರಮಾಣವನ್ನು ನಿಗದಿ ಮಾಡಿದೆ. ಮೊದಲಿನಿಂದ 6:6:5 ಹಂಚಿಕೆ ಪ್ರಸ್ತಾಪಿತವಾಗಿದ್ದರೂ, ಮಿತಿ ಒಳಗೇ ಇರಲು ಇದನ್ನು ತಿದ್ದುಪಡಿ ಮಾಡಲಾಗಿದೆ.
ಐತಿಹಾಸಿಕ ಹೋರಾಟದ ಫಲ
ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿಗೆ ಸಂಬಂಧಿಸಿ ಹಲವು ವರ್ಷಗಳಿಂದ ಹೋರಾಟಗಳು ನಡೆದಿದ್ದು, ಚಿತ್ರದುರ್ಗದಲ್ಲಿ ನಡೆದ ಸಮಾವೇಶ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಒಮ್ಮತ ವ್ಯಕ್ತವಾಗಿತ್ತು. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗದ ವರದಿಯೂ ಈ ನಿರ್ಧಾರಕ್ಕೆ ಆಧಾರವಾಗಿದೆ.
ನೇಮಕಾತಿಗೆ ವೇಗ
ರಾಜ್ಯ ಬಜೆಟ್ನಲ್ಲಿ ಘೋಷಿಸಿರುವಂತೆ, ಈ ವರ್ಷ 56,432 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ನೇಮಕಾತಿಯಲ್ಲಿ ಒಳಮೀಸಲಾತಿ ಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಬದ್ಧತೆ
ಪರಿಶಿಷ್ಟ ಜಾತಿ (17%) ಮತ್ತು ಪರಿಶಿಷ್ಟ ಪಂಗಡ (7%) ಸೇರಿ ಒಟ್ಟು 24% ಮೀಸಲಾತಿ ನೀಡುವ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸಿದ್ದು, ನ್ಯಾಯಾಲಯದಿಂದ ಅನುಕೂಲಕರ ತೀರ್ಪು ಬಂದಲ್ಲಿ ಹಿಂದಿನ 6:6:5 ಹಂಚಿಕೆ ಮಾದರಿಯನ್ನೇ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa