
ಧಾರವಾಡ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : 2026 ರ ಮಾರ್ಚ್ ತಿಂಗಳಲ್ಲಿ ಅಕಾಲಿಕ ಮಳೆ, ಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಆಗಿರುವ ಬೆಳೆಹಾನಿಯ ಕುರಿತು ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆಕೈಗೊಂಡು, ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಿ, ಬೆಳೆಹಾನಿ ಪರಿಹಾರ ಪಾವತಿಸಲು ಸರ್ಕಾರವು ಆದೇಶಿಸಿದೆ. ಸರ್ಕಾರದ ನಿರ್ದೇಶನದಂತೆ, ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು 03 ದಿನದೊಳಗಾಗಿ ತಮ್ಮ ಫ್ರೂಟ್ಸ್ ಐಡಿ ಸೃಜಿಸಿಕೊಳ್ಳಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರ ಮೇಲೆ, ಫ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ 2026 ರ ಮಾರ್ಚ ಮಾಹೆಯಲ್ಲಿ ಅಕಾಲಿಕ ಮಳೆ, ಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕುಂದಗೋಳ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲ್ಲೂಕಿನಲ್ಲಿ ಸುಮಾರು 1,980.05 ಹೆಕ್ಟರ್ ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿಯಾಗಿದೆ.
ಈಗಾಗಲೇ 1,539 ರೈತರ 1,038.45 ಹೆಕ್ಟರ್ನಷ್ಟು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಕಿಯಿರುವ 552.99 ಹೆಕ್ಟರ್ ಅಂದರೆ 567 ರೈತರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವದರಿಂದ ವರಿಹಾರ ಪಾವತಿಸಲು ಸಾಧ್ಯವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ, ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು 03 ದಿನದೊಳಗಾಗಿ ತಮ್ಮ ಆಧಾರ್ ಪ್ರತಿ, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಫ್ರೂಟ್ಸ್ ಐಡಿ ಸೃಜಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ರೈತರು ಪರಿಹಾರ ಪಡೆಯಲು ಸಾಧ್ಯಾವಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa