

ಬಳ್ಳಾರಿ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ಕುಮಾರ್ ಉದ್ಯಾನವನದಲ್ಲಿನ ಡಾ.ರಾಜ್ ಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸುವ ಮೂಲಕ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭೂತ ಗೌರವ ನಮನ ಸಲ್ಲಿಸಿದರು.
ಈ ವೇಳೆ ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಡಾ. ರಾಜ್ಕುಮಾರ್ ಅವರು ಅಪ್ಪಟ ಕನ್ನಡಪ್ರೇಮಿಯಾಗಿದ್ದರು. ಅವರ ಸಾಧನೆ ಹಾಗೂ ಕನ್ನಡ ನಾಡು-ನುಡಿಗೆ ಅವರು ನೀಡಿದ ಕೊಡುಗೆ ಅಪಾರ. ಕರ್ನಾಟಕ ಏಕೀಕರಣ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ನಡೆದ ಗೋಕಾಕ್ ಚಳುವಳಿಯಲ್ಲಿ ಡಾ. ರಾಜ್ ಅವರ ಪಾತ್ರ ಅವಿಸ್ಮರಣೀಯ. ಅವರ ನಾಯಕತ್ವದಲ್ಲಿ ನಡೆದ ಈ ಹೋರಾಟ ಕನ್ನಡ ಭಾಷೆಯ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ ಎಂದು ಹೇಳಿದರು.
ಡಾ.ರಾಜ್ ಕುಮಾರ್ ಅವರು ಅಂದಿನ ಕಾಲದ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ಕೇವಲ ಒಂದು ಗಂಟೆಯ ಕಾಲ ತಮ್ಮ ಸಿನಿಮಾದಲ್ಲಿ ನಟಿಸಲು ಕೇಳಿಕೊಂಡಾಗಲೂ, ನಾನು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವುದಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ ಅವರ ಬದ್ಧತೆಯನ್ನು ನಾವು ಸ್ಮರಿಸಬೇಕು ಎಂದರು.
‘ಬಂಗಾರದ ಮನುಷ್ಯ' ಸಿನಿಮಾದ ಮೂಲಕ ನೂರಾರು ಯುವಕರು ನಗರ ಪ್ರದೇಶದಿಂದ ಮರಳಿ ತಮ್ಮ ಹಳ್ಳಿಗಳಿಗೆ ಹೋಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ ಸಂಗತಿಯನ್ನು ಮೆಲುಕು ಹಾಕಿದರು.
ಡಾ. ರಾಜ್ಕುಮಾರ್ ಅವರ ಜನ್ಮದಿನವನ್ನು ಸರ್ಕಾರಿ ಮಟ್ಟದಲ್ಲಿ ಅಧಿಕೃತವಾಗಿ ಆಚರಿಸಲು ನಿರ್ಧರಿಸಿದ ಸರ್ಕಾರದ ಕ್ರಮಕ್ಕೆ ಅಭಿನಂದನೆ ತಿಳಿಸಿದ ಅವರು, ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತ ಡಾ.ರಾಜ್ ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಲಿ ಎಂದು ಹಾರೈಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ ಚಿದಾನಂದಪ್ಪ ಅವರು ಮಾತನಾಡಿ, ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜಕುಮಾರ್ ಅವರು ಕೇವಲ ಒಬ್ಬ ನಟರಾಗಿರಲಿಲ್ಲ, ಅವರು ಇಡೀ ಕರ್ನಾಟಕದ ಮನೆಮನ ಬೆಳಗಿದ ಸಂಸ್ಕøತಿಯ ಪ್ರತೀಕವಾಗಿದ್ದರು. ಅಣ್ಣಾವ್ರಿಗೂ ಬಳ್ಳಾರಿಗೂ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಹೇಳಿದರು.
ಸಾಮಾನ್ಯವಾಗಿ ಯಾವುದೇ ರಂಗದಲ್ಲಿ ಯಶಸ್ಸು ಸಿಕ್ಕ ತಕ್ಷಣ ಜನರು ರಾಜಕೀಯಕ್ಕೆ ಬರಲು ಬಯಸುತ್ತಾರೆ. ಆದರೆ ಅಣ್ಣಾವ್ರು ತಮಗೆ ಮುಖ್ಯಮಂತ್ರಿಯಾಗುವ ಅತಿ ದೊಡ್ಡ ಅವಕಾಶಗಳಿದ್ದರೂ, ನಾನು ಇಡೀ ಕನ್ನಡ ನಾಡಿನ ಮಗನಾಗಿ ಇರಲು ಬಯಸುತ್ತೇನೆ ಎಂದು ರಾಜಕೀಯವನ್ನು ನಯವಾಗಿ ತಿರಸ್ಕರಿಸಿದ್ದರು ಎಂದು ತಿಳಿಸಿದರು.
ಎಷ್ಟೇ ದೊಡ್ಡ ಹೆಸರು ಮತ್ತು ಯಶಸ್ಸು ಗಳಿಸಿದರೂ ಇತರರಿಗೆ ಗೌರವ ನೀಡುವುದು ಮತ್ತು ಸಜ್ಜನಿಕೆಯಿಂದ ವರ್ತಿಸುವುದನ್ನು ಅಣ್ಣಾವ್ರಿಂದ ಕಲಿಯಬೇಕು. ಇಂದಿಗೂ ಸಿನಿಮಾ ರಂಗದಲ್ಲಿ ಯಾರಾದರೂ ಅಹಂಕಾರದಿಂದ ವರ್ತಿಸಿದರೆ, ಜನರು ತಕ್ಷಣವೇ ಅಣ್ಣಾವ್ರ ಸರಳತೆಯನ್ನು ಉದಾಹರಿಸುತ್ತಾರೆ. ಅವರ ಪ್ರಭಾವ ಅಷ್ಟು ಆಳವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಮಾತನಾಡಿ, ಡಾ.ರಾಜ್ ಕುಮಾರ್ ಅವರು ಕೇವಲ ನಟರಲ್ಲ, ಅವರು ಕನ್ನಡ ಸಂಸ್ಕøತಿಯ ರಾಯಭಾರಿ. ಅವರ ‘ಬಂಗಾರದ ಮನುಷ್ಯ', ‘ಗುರಿ' ನಂತಹ ಚಿತ್ರಗಳು ಇಂದಿಗೂ ಸಮಾಜಕ್ಕೆ ಮಾದರಿಯಾಗಿವೆ ಎಂದು ಸ್ಮರಿಸಿದರು.
ಡಾ. ರಾಜ್ ಹಾಡುಗಳ ಸಾಹಿತ್ಯದಲ್ಲಿರುವ ಜೀವನ ಮೌಲ್ಯಗಳು ಆಳವಾಗಿ ಬೇರೂರಿವೆ. ‘ಆಡಿಸಿ ನೋಡು ಬೀಳಿಸಿ ನೋಡು...’ ನಂತಹ ಹಾಡುಗಳು ಇಂದಿಗೂ ಜೀವನಕ್ಕೆ ಸ್ಫೂರ್ತಿಯಾಗಿವೆ. ಡಾ. ರಾಜ್ಕುಮಾರ್ ಅವರಿಗೆ ಅವರೇ ಸಾಟಿ. ಅವರ ಕೊಡುಗೆ ನಾಡು, ನುಡಿ ಮತ್ತು ಕಲೆಗೆ ಅನನ್ಯವಾದುದು. ಅವರ ಜನ್ಮದಿನವನ್ನು ಆಚರಿಸುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ ಗುರುರಾಜ್, ಪ್ರದಸ ನವೀನ್ ಕುಮಾರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಡಾ.ರಾಜ್ ಕುಮಾರ್ ಅಭಿಮಾನಿಗಳು, ಸಾರ್ವಜನಿಕರು ಹಾಗೂ ಮತ್ತೀತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್