
ಗದಗ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕನ್ನಡ ಚಲನ ಚಿತ್ರರಂಗದ ಅಪ್ರತಿಮ ನಟ ಡಾ. ರಾಜಕುಮಾರ ಅವರ ವ್ಯಕ್ತಿತ್ವ, ಮೌಲ್ಯಗಳು ಮತ್ತು ಸಮಾಜದ ಮೇಲಿನ ಬದ್ಧತೆ ಇಂದಿನ ಯುವಪೀಳಿಗೆಗೆ ದಿಕ್ಕು ತೋರಿಸುತ್ತವೆ ಡಾ. ರಾಜಕುಮಾರ ಅವರು ಒಬ್ಬ ವ್ಯಕ್ತಿ ಅಲ್ಲ ಕನ್ನಡ ಚಿತ್ರರಂಗಕ್ಕೆ ಶಕ್ತಿ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.
ಗದಗ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಗದಗ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ. ರಾಜಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಡಾ. ರಾಜಕುಮಾರ್ ಅವರು ಕೇವಲ ನಟರಲ್ಲ, ಸರಳತೆ, ಶಿಸ್ತಿನ ಜೀವನ ಮತ್ತು ಮಾನವೀಯತೆಗಾಗಿ ಹೆಸರಾಗಿದ್ದ ಮಹಾನ್ ವ್ಯಕ್ತಿ ಎಂದು ಹೇಳಿದರು. ಅವರ ನಡೆ-ನುಡಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಯುವಕರು ಅವರ ಜೀವನದಿಂದ ಪಾಠಗಳನ್ನು ಕಲಿಯಬೇಕು ಎಂದು ತಿಳಿಸಿದರು.
ರಾಜಕುಮಾರ ರವರು ಕನ್ನಡ ಚಿತ್ರರಂಗದಲ್ಲಿ ಸಾಧಿಸಿದ ಯಶಸ್ಸಿನ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಮೇಲಿನ ಅಪಾರ ಪ್ರೀತಿ ಎಲ್ಲರಿಗೂ ಪ್ರೇರಣೆಯಾಗಿದೆ, ಡಾ. ರಾಜಕುಮಾರ್ ಅವರಂತಹ ವ್ಯಕ್ತಿತ್ವಗಳು ಸಮಾಜದಲ್ಲಿ ಸದಾ ಸ್ಮರಣೀಯವಾಗಿರುತ್ತವೆ ಜಿಲ್ಲಾಧಿಕಾರಿ ಎಂದು ಹೇಳಿದರು.
ಡಾ. ರಾಜಕುಮಾರ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ದೀರ್ಘ ಸಿನಿ ಜೀವನದಲ್ಲಿ ಎರಡುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಹಲವು ಪೀಳಿಗೆಗಳಿಗೆ ಮನರಂಜನೆ ನೀಡುವುದರ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಹರಡುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ ಎಂದರು.
ಅವರ ವ್ಯಕ್ತಿತ್ವದಲ್ಲಿ ಕಂಡುಬಂದ ವಿನಯ, ಶಿಸ್ತು ಮತ್ತು ನೈತಿಕತೆ ಇಂದಿಗೂ ಯುವಜನತೆಗೆ ಮಾದರಿಯಾಗಿದೆ. ಕನ್ನಡ ನಾಡು-ನುಡಿಯ ಮೇಲಿನ ಅವರ ಪ್ರೀತಿ ಹಾಗೂ ನಿಷ್ಠೆ, ಅವರನ್ನು ಜನಮನಗಳಲ್ಲಿ ಸದಾ ಜೀವಂತವಾಗಿರಿಸುತ್ತದೆ ಎಂದು ಹೇಳಿದರು.
ಡಾ. ರಾಜಕುಮಾರ ಅವರಂತಹ ಮಹಾನ್ ಕಲಾವಿದರ ಕೊಡುಗೆಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಜರಾಮರವಾಗಿದ್ದು, ಅವರ ಸ್ಮರಣೆ ಎಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದರು
ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಧ್ಯಕ್ಷರಾದ ಬಸವರಾಜ ಮನಗುಂಡಿ ಮಾತನಾಡಿ ಡಾ. ರಾಜಕುಮಾರ ಅವರು 1929 ಎಪ್ರಿಲ್ 24 ರಂದು ಗಾಜನೂರಿನಲ್ಲಿ ಜನಿಸಿದರು. ಇವರ ಮೊದಲ ಹೆಸರು ಮುತ್ತುರಾಜ ಆಗಿತ್ತು ಚಿತ್ರರಂಗಕ್ಕೆ ಪಾದಾರ್ಪಣೆಗೊಂಡ ನಂತರ ಡಾ ರಾಜಕುಮಾರ ಎಂಬ ಹೆಸರಿನಿಂದ ಕನ್ನಡ ಚಿತ್ರ ರಂಗಕ್ಕೆ ಪರಿಚಿತರಾದರು. ಅವರ ಬಂಗಾರದ ಮನುಷ್ಯ ಚಲನಚಿತ್ರ ಕೇವಲ ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಆದರ್ಶಗಳನ್ನು ಪಾಲಿಸಿದ ಮಹಾನ್ ಚೇತನ ಡಾ. ರಾಜಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಣ್ಣಾವ್ರ ಜೀವನದ ಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿದರು.
ರಂಗಭೂಮಿಯಿಂದ ಬೆಳ್ಳಿ ತೆರೆಯವರೆಗೆ ವರನಟ ಡಾ. ರಾಜಕುಮಾರ್ ಅವರ ಪೂರ್ವಾಶ್ರಮದ ಹೆಸರು ಮುತ್ತುರಾಜು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗುಬ್ಬಿ ವೀರಣ್ಣನವರ ರಂಗಭೂಮಿ ನಾಟಕ ಕಂಪನಿಯನ್ನು ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲನಟನಾಗಿ ಅಭಿನಯ ಪಯಣ ಆರಂಭಿಸಿದ ಇವರು, 1954 ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.
ಅಪ್ರತಿಮ ಚಿತ್ರಗಳ ಸರಮಾಲೆ ಡಾ. ರಾಜ್ ಕುಮಾರ್ ಅವರು ತಮ್ಮ ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಸರಿಸುಮಾರು 205 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ಅವರ ಪ್ರಮುಖ ಚಿತ್ರಗಳಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದಬಂಗಾರದ ಮನುಷ್ಯ’ಚಿತ್ರವು 1972 ರಲ್ಲಿ ಬಿಡುಗಡೆಯಾಗಿ‘ ಸಾವಿರಾರು ಯುವಕರು ಕೃಷಿಯತ್ತ ಮುಖ ಮಾಡಲು ಪ್ರೇರಣೆಯಾಯಿತು.
ಐತಿಹಾಸಿಕ ಮೆರುಗು ನೀಡಿದ ಕನ್ನಡ ನಾಡಿನ ಇತಿಹಾಸ ಸಾರುವ ‘ಮಯೂರ’ (1975) ಚಿತ್ರವು ಇತಿಹಾಸದ ಬಗ್ಗೆ ಯುವಜನತೆಯಲ್ಲಿ ಕುತೂಹಲ ಮತ್ತು ಅಭಿಮಾನ ಮೂಡಿಸಿತು.
ರಾಜಕುಮಾರ ರವರ ಪ್ರಮುಖ ಚಿತ್ರಗಳು ಕೃಷ್ಣ ಗಾರುಡಿಗ (1958), ಜಗಜ್ಯೋತಿ ಬಸವೇಶ್ವರ (1959), ಸತ್ಯ ಹರಿಶ್ಚಂದ್ರ (1965), ಕಸ್ತೂರಿ ನಿವಾಸ (1971), ರಣಧೀರ ಕಂಠೀರವ ಮತ್ತು ಭಕ್ತ ಕನಕದಾಸ (1960). ಜೀವನಪರ್ಯಂತದ ಆದರ್ಶಗಳು.
ಇಂದಿನ ಕಾಲದ ನಟರು ತೆರೆಯ ಮೇಲೆ ಧೂಮಪಾನ ಮತ್ತು ಮದ್ಯಪಾನದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಡಾ. ರಾಜ್ ಅವರು ತಮ್ಮ ಇಡೀ ಜೀವನದಲ್ಲಿ ಒಂದೇ ಒಂದು ಚಿತ್ರದಲ್ಲೂ ಇಂತಹ ಸಮಾಜಕ್ಕೆ ತಪ್ಪು ಸಂದೇಶ ನೀಡುವ ದೃಶ್ಯಗಳಲ್ಲಿ ನಟಿಸಲಿಲ್ಲ ಎಂಬುದು ಅವರ ಸಾಮಾಜಿಕ ಬದ್ಧತೆಗೆ ಸಾಕ್ಷಿ.
ತಮ್ಮ 205 ಚಿತ್ರಗಳಲ್ಲಿ ಯಾವತ್ತೂ ಮದ್ಯಪಾನ ಅಥವಾ ಧೂಮಪಾನದ ದೃಶ್ಯಗಳಲ್ಲಿ ನಟಿಸದ ವಿಶ್ವದ ಏಕೈಕ ನಟ ಡಾ. ರಾಜಕುಮಾರ್ ಎಂದು ಬಸವರಾಜ ಮನಗುಂಡಿ ಬಣ್ಣಿಸಿದರು.
ಕನ್ನಡ ಚಿತ್ರರಂಗಕ್ಕೆ ಇವರು ನೀಡಿದ ಅಪ್ರತಿಮ ಕೊಡುಗೆಗಾಗಿ ಹಲವು ಪ್ರಶಸ್ತಿ ಗೌರವಗಳು ಇವರನ್ನು ಅರಸಿ ಬಂದಿವೆ:
ಅವರಿಗೆ 1983 ರಲ್ಲಿ ಪದ್ಮಭೂಷಣ ಮತ್ತು 1995 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ. 1992 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ, 1976 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್. 1999 ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ‘ನಾಡೋಜ’ಪ್ರಶಸ್ತಿ ಪಡೆದ ಮೊದಲ ಕನ್ನಡ ನಟರಾಗಿದ್ದಾರೆ ಎಂದು ಹೇಳಿದರು.
2000ನೇ ಇಸವಿಯಲ್ಲಿ ವೀರಪ್ಪನ್ನಿಂದ ಅಪಹರಣಕ್ಕೊಳಗಾದ ಸಂದರ್ಭದಲ್ಲೂ ಧೈರ್ಯಗೆಡದೆ, ನಾನು ಆರೋಗ್ಯವಾಗಿದ್ದೇನೆ, ಯಾರೂ ಶಾಂತಿ ಕಳೆದುಕೊಳ್ಳಬೇಡಿ ಎಂದು ಸಂದೇಶ ನೀಡಿದ ಅವರು ನಿಜಕ್ಕೂ ಕನ್ನಡಿಗರ ಪಾಲಿನ'ಅಣ್ಣಾವ್ರು' ಎಂದರು.
ರಾಜಕುಮಾರ್ ಅವರ ಬದುಕು ಮತ್ತು ಬರಹಗಳು ಇಂದಿನ ಯುವಪೀಳಿಗೆಗೆ ಸದಾ ದಾರಿದೀಪ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ಆದರ್ಶಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಉಪನ್ಯಾಸ ನೀಡಿದರು.
ಕಲಾವಿದ ಗೌಡಪ್ಪ ಬೊಮ್ಮಪ್ಪನವರ ಹಾಗೂ ಕಲಾ ತಂಡದವರಿಂದ ಡಾ. ರಾಜಕುಮಾರ ಚಿತ್ರಗೀತೆಗಳ ಗಾಯನ ಪ್ರಸ್ತುತ ಪಡಿಸಿದರು. ವೀರಣ್ಣ ಅಂಗಡಿ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ ಹಾಗೂ ಅಭಿಮಾನಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್., ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ. ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಡಾ. ನಂದಾ ಹಣಬರಹಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ವಸಂತ ಮಡ್ಲೂರ, ಡಿಡಿಪಿಐ ಆರ್ ಎಸ್ ಬುರಡಿ, ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಧ್ಯಕ್ಷ ವಿಜಯ ಕಲ್ಮನಿ, ಜಿಲ್ಲಾಧ್ಯಕ್ಷರಾದ ವಿಠಲ್ ಪರಾಪುರ, ಉಪಾಧ್ಯಕ್ಷ ನಾಗರಾಜ ಗುತ್ತಿ, ಮಲ್ಲಿಕಾರ್ಜುನ ಸಂಗಾಪುರ, ಖಜಾಂಚಿ ವಿನಾಯಕ ಕಜಕೋಶಿ, ಶಹರ ಅಧ್ಯಕ್ಷರು ಮಲ್ಲೇಶ ಪರಾಪುರ, ಸಂಘಟನಾ ಗೌರವಧ್ಯಕ್ಷರಾಮು ಬಳ್ಳಾರಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಮೇಘನಾ ಕೊಟ್ಟೂರು, ಭಾಷಸಾಬ್ ಹುಲಕೋಟಿ, ಹಿರಿಯ ರಾಜಕುಮಾರ ಅಭಿಮಾನಿ ಪರಶುರಾಮ ರಾಮಗಿರಿ, ರಾಘವೇಂದ್ರ ಪರಾಪುರ, ಗಣೇಶ ಹುಬ್ಬಳ್ಳಿ ಸೇರಿದಂತೆ ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಅಭಿಮಾನಿಗಳು ಮತ್ತು ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP