
ಗದಗ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯನ್ನು ಶುಕ್ರವಾರ ಜಿಲ್ಲಾಡಳಿತದ ಆಟಡಿಟೋರಿಯಂ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರು, ಪಂಚಾಯತ್ ರಾಜ್ ದಿನಾಚರಣೆಯನ್ನು ಪಂಚಾಯತಗಳ ಹುಟ್ಟುಹಬ್ಬದಂತೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ತಾವು ಸಾಮಾಜಿಕ ಕ್ಷೇತ್ರಕ್ಕೆ ಪಂಚಾಯತ್ ವ್ಯವಸ್ಥೆಯಿಂದಲೇ ಬಂದಿರುವುದಾಗಿ ತಿಳಿಸಿದ ಅವರು, ಹಿಂದಿನ ದಿನಗಳಲ್ಲಿ ಪಂಚಾಯತ್ ವ್ಯವಸ್ಥೆಗೆ ಕಾನೂನಿನಲ್ಲಿ ನೀಡಿರುವ ಅಧಿಕಾರಗಳನ್ನು ಸಮರ್ಪಕವಾಗಿ ಚಲಾಯಿಸಲು ಅವಕಾಶವಿತ್ತು ಎಂದರು.
ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಹಿಂದಿನ ಸರ್ಕಾರ ನಡೆಸಲಿಲ್ಲ, ಅದನ್ನೇ ಇಂದಿನ ಸರ್ಕಾರವೂ ಮುಂದುವರೆಸಿದೆ ಎಂದ ಅವರು, ಜನಪ್ರತಿನಿಧಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು. ಪ್ರತಿಭಟನೆ ಮಾಡದಿದ್ದಲ್ಲಿ ಅಧಿಕಾರದಲ್ಲಿ ಪಾಲು ಪಡೆಯಲು ಸಾಧ್ಯವಿಲ್ಲ ಎಂಬ ಅರಿವು ಮೂಡಬೇಕು ಎಂದು ಹೇಳಿದರು.
ಗ್ರಾಮ ಮಟ್ಟದಲ್ಲಿ ಸಣ್ಣ ವಿಷಯಗಳಿಗೂ ಜನರು ಎಚ್ಚರಿಕೆಯಿಂದಿರುವಂತೆ, ಪಂಚಾಯತ್ ಚುನಾವಣೆಯಂತಹ ಮಹತ್ವದ ವಿಷಯದಲ್ಲಿ ಮೌನವಾಗಿರುವುದು ಸರಿಯಲ್ಲ. ಸರ್ಕಾರ ಚುನಾವಣೆ ನಡೆಸದೆ ನಿಮ್ಮ ಅಧಿಕಾರ ಕಡಿತ ಮಾಡಿದರೂ ಮೌನವಾಗಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.
ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಪೂರಕ ವಾತಾವರಣ ಇದೆ ಎಂದು ಹೇಳಿದ ಅವರು, ಗ್ರಾಮ ಸಭೆಯೇ ಅಭಿವೃದ್ಧಿಯ ಕೇಂದ್ರವಾಗಿದ್ದು, ಊರಿನ ಕಾಮಗಾರಿಗಳ ಕುರಿತು ಅಂತಿಮ ನಿರ್ಧಾರಗಳನ್ನು ಗ್ರಾಮ ಸಭೆಯಲ್ಲೇ ಕೈಗೊಳ್ಳಬೇಕು. ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿ ಗದಗ ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು. ಪಂಚಾಯತ್ ರಾಜ್ ವ್ಯವಸ್ಥೆ ರಾಜಕೀಯ ನಾಯಕತ್ವ ಬೆಳೆಸುವ ಪಾಠಶಾಲೆಯಾಗಿದ್ದು, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಜನರಿಗೆ ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಂಬಲ ಜನಪ್ರತಿನಿಧಿಗಳಲ್ಲಿ ಇರಬೇಕು ಎಂದು ಹೇಳಿದರು.
ಗದಗ ಜಿಲ್ಲೆಯಲ್ಲಿ ಗಾಂಧೀಜಿಯವರ ಗ್ರಾಮರಾಜ್ಯದೊಂದಿಗೆ ರಾಮರಾಜ್ಯ ನಿರ್ಮಾಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಅವರು, ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕೆಂದು ಕರೆ ನೀಡಿದರು. ಪಂಚಾಯತ್ ರಾಜ್ ಸಚಿವರಾಗಿದ್ದ ನಜೀರ್ ಸಾಬ್ ಅವರ ಪರಿಕಲ್ಪನೆಯ ವಿಕೇಂದ್ರೀಕರಣ ವ್ಯವಸ್ಥೆ ದೇಶದಲ್ಲಿ ಬಲಪಡಿಸಲು ಅವರು ಕಾನೂನು ರೂಪಿಸಿ ಅನುಷ್ಠಾನಕ್ಕೆ ಅಡಿಗಲ್ಲು ಹಾಕಿದ ವಿಚಾರವನ್ನು ಡಿ ಆರ್ ಪಾಟೀಲರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎನ್. ಶ್ರೀಧರ ಅವರು, ಹಿಂದಿನ ಕಾಲದಲ್ಲಿ ಗ್ರಾಮ ಮಟ್ಟದಲ್ಲೇ ಪಂಚಾಯತಿ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪದ್ಧತಿ ಇತ್ತು ಎಂದು ಹೇಳಿದರು. ಇಂದಿನ ದಿನಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಿ ರೂಪುಗೊಂಡಿದ್ದು, ರಾಜ್ಯದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಸಮರ್ಥವಾಗಿ ಜಾರಿಗೊಂಡಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯತ್ ಸದಸ್ಯರು ತಮ್ಮ ವಾರ್ಡನ್ನು ಮಾದರಿ ವಾರ್ಡನ್ನಾಗಿಸಲು ಸಂಕಲ್ಪಬದ್ಧರಾಗಿರಬೇಕು. ವಿಕೇಂದ್ರೀಕರಣವಿಲ್ಲದೆ ಗ್ರಾಮ ಆಡಳಿತ ಅಸಾಧ್ಯ ಎಂಬ ಹಂತಕ್ಕೆ ಸಮಾಜ ತಲುಪಿದೆ ಎಂದು ಅವರು ಹೇಳಿದರು. 1973ರ ಪಂಚಾಯತ್ ರಾಜ್ ತಿದ್ದುಪಡಿಯಿಂದ ಪಂಚಾಯತ್ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಬಲ ಸಿಕ್ಕಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಾಭಿವೃದ್ಧಿ ಸಾಧಿಸಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ಪ್ರಕಾಶ ಮಾಚೇನಹಳ್ಳಿ ಮಾತನಾಡಿ, ಪಂಚಾಯತ್ ರಾಜ್ ಆಶಯಗಳನ್ನು ಜಾರಿಗೊಳಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಪಂಚಾಯತ್ ಎಂದರೆ ಐದು ಜನರ ಆಡಳಿತ ವ್ಯವಸ್ಥೆಯಾಗಿದ್ದು, ಇದು ವೇದಗಳ ಕಾಲದಿಂದಲೇ ಪ್ರಚಲಿತದಲ್ಲಿದೆ ಎಂದು ವಿವರಿಸಿದರು. ಗಂಗರು, ಮೌರ್ಯರು ಹಾಗೂ ಚೋಳರ ಆಡಳಿತ ಕಾಲದಲ್ಲಿಯೂ ಸ್ಥಳೀಯ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎಂಬುದನ್ನು ಇತಿಹಾಸ ಸ್ಪಷ್ಟಪಡಿಸುತ್ತದೆ ಎಂದರು.
ಭಾರತವು ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಗ್ರಾಮ ಸ್ವರಾಜ್ಯದ ಕನಸು ಮಹಾತ್ಮ ಗಾಂಧೀಜಿ ಅವರದ್ದಾಗಿತ್ತು. ಗ್ರಾಮಗಳು ಸ್ವಾಯತ್ತತೆ ಸಾಧಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಜನರಿಗೆ ಹತ್ತಿರದ ಆಡಳಿತ ವ್ಯವಸ್ಥೆಯೇ ಪಂಚಾಯತ್ ಆಡಳಿತ ಎಂದು ಅವರು ದೃಢವಾಗಿ ನಂಬಿದ್ದರು ಎಂದು ಹೇಳಿದರು.
ಪಂಚಾಯತ್ ರಾಜ್ ವ್ಯವಸ್ಥೆ ಮೇಲಿಂದ ಕೆಳಗೆ ಹರಿಯುವ ನೀರಿನಂತಿರದೆ, ಕೆಳಗಿನಿಂದ ಮೇಲಕ್ಕೆ ಚಿಮ್ಮುವ ಚಿಲುಮೆಯಂತೆ ಬೆಳೆಯಬೇಕು ಎಂದು ತಮ್ಮದೇ ಶೈಲಿಯಲ್ಲಿ ವಿವರಿಸಿ, ಜನಸಾಮಾನ್ಯರ ಸಕ್ರಿಯ ಭಾಗವಹಿಸುವಿಕೆ ಅಗತ್ಯವೆಂದು ತಿಳಿಸಿದರು.
ಉತ್ತಮ ಪ್ರಗತಿ ಸಾಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇದೇ ಸಂದರ್ಭದಲ್ಲಿ ಅತಿಥಿಗಳು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮ ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿಬಿ ಅಸೂಟಿ, ಜಿಪಂ ಮಾಜಿ ಅಧ್ಯಕ್ಷ ರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪ್ರೊ.ಜೆ ಕೆ ಜಮಾದಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ ಆರ್, ಡಿಎಸ್ ಸಿ ಆರ್ ಮುಂಡರಗಿ, ಎಂ ವೈ ಪಾಟೀಲ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಜಿಪಂ, ತಾಪಂ ಅಧಿಲಾರಿಗಳು, ಪಿಡಿಓ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP