ಐಟಿ ನಂತರ ಅಗ್ರಿಟೆಕ್ : ಬೆಂಗಳೂರು ರಾಜಧಾನಿ: ಕೃಷಿ ಲಾಭದಾಯಕಗೊಳಿಸಲು ಸಿದ್ದರಾಮಯ್ಯ ಕರೆ
ಬೆಂಗಳೂರು, 24 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಮುಂಚೂಣಿ ಕೇಂದ್ರವಾಗಿರುವ ಬೆಂಗಳೂರು, ಕೃಷಿ ತಂತ್ರಜ್ಞಾನ (ಅಗ್ರಿಟೆಕ್) ಕ್ಷೇತ್ರದಲ್ಲಿಯೂ ರಾಷ್ಟ್ರದ ರಾಜಧಾನಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕೃಷಿ ಲಾಭದಾಯಕವಾದರೆ ಯುವಜನತೆ
Cm


ಬೆಂಗಳೂರು, 24 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಮುಂಚೂಣಿ ಕೇಂದ್ರವಾಗಿರುವ ಬೆಂಗಳೂರು, ಕೃಷಿ ತಂತ್ರಜ್ಞಾನ (ಅಗ್ರಿಟೆಕ್) ಕ್ಷೇತ್ರದಲ್ಲಿಯೂ ರಾಷ್ಟ್ರದ ರಾಜಧಾನಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕೃಷಿ ಲಾಭದಾಯಕವಾದರೆ ಯುವಜನತೆ ಸಹಜವಾಗಿ ಕೃಷಿಯತ್ತ ಮುಖಮಾಡುತ್ತಾರೆ ಎಂದು ಅವರು ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ವತಿಯಿಂದ ಆಯೋಜಿಸಲಾದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್–2026” ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದ ನವೀನ ತಂತ್ರಜ್ಞಾನಗಳು ಪ್ರತಿ ರೈತನಿಗೂ ತಲುಪುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಮ್ಮೇಳನದಲ್ಲಿ ರೈತರ ಪಾಲ್ಗೊಳ್ಳುವಿಕೆ ಹೆಚ್ಚಳ ಅಗತ್ಯವಿದೆ ಎಂದು ತಿಳಿಸಿದ ಸಿಎಂ, ಸಾವಯವ ಕೃಷಿ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನವನ್ನು ಪ್ರತ್ಯೇಕವಾಗಿ ಆಯೋಜಿಸಿದರೆ ಇನ್ನಷ್ಟು ಫಲಪ್ರದವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಭಾರತ ಕೃಷಿಪ್ರಧಾನ ದೇಶವಾಗಿರುವುದರಿಂದ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕಗೊಳಿಸುವುದು ಮುಖ್ಯ ಗುರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಕೃಷಿಯಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೃಷಿಯಲ್ಲಿ ಆದಾಯ ಹೆಚ್ಚಾದರೆ ಯುವಕರು ಈ ಕ್ಷೇತ್ರದತ್ತ ಆಕರ್ಷಿತರಾಗುತ್ತಾರೆ ಎಂದು ಹೇಳಿದರು. ಈ ದಿಸೆಯಲ್ಲಿ ಸರ್ಕಾರದ ಯೋಜನೆಗಳಿಗೆ ಕೈಗಾರಿಕೆಗಳೂ ಸಹಭಾಗಿಯಾಗಬೇಕು ಎಂದು ಕರೆ ನೀಡಿದರು.

ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆ ಹೆಚ್ಚಿಸಬೇಕಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೃಷಿ ಮತ್ತು ತಂತ್ರಜ್ಞಾನಗಳ ಸಂಯೋಜನೆ ಅಗತ್ಯವೆಂದು ಸಿಎಂ ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ “ಕೃಷಿಭಾಗ್ಯ” ಯೋಜನೆಯನ್ನು ಮರುಜಾರಿಗೊಳಿಸಿರುವುದಾಗಿ ಅವರು ಹೇಳಿದರು. ಒಣಭೂಮಿಯ ಪ್ರಮಾಣ ಹೆಚ್ಚಿರುವ ಕರ್ನಾಟಕದಲ್ಲಿ ಸಣ್ಣ ಮತ್ತು ಅಲ್ಪಭೂದಾರ ರೈತರ ನೆರವಿಗಾಗಿ ಈ ಯೋಜನೆ ಪರಿಣಾಮಕಾರಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಸುಮಾರು 83 ಲಕ್ಷ ರೈತರಿಗೆ ₹70,000 ಕೋಟಿ ಕೃಷಿಸಾಲ ವಿತರಿಸಲಾಗಿದೆ. ಕೈಗಾರಿಕೆ, ಗ್ರಾಮೀಣಾಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ, ಕೃಷಿ ಕ್ಷೇತ್ರದಲ್ಲಿಯೂ ಹೆಚ್ಚಿನ ಹೂಡಿಕೆ ಆಕರ್ಷಿಸಬೇಕಾಗಿದೆ. ಇದರಿಂದ ಕೃಷಿ ಲಾಭದಾಯಕವಾಗುವುದರೊಂದಿಗೆ ರೈತರ ಆದಾಯವೂ ಹೆಚ್ಚಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande