
ಧಾರವಾಡ, 24 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಡಾ.ರಾಜಕುಮಾರ ಅವರ ಸಿನಿಮಾ ನೋಡಿ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದೇವೆ. ಸಾಕ್ಷಾತ್ಕಾರ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಹಲವಾರು ಸಿನಿಮಾಗಳು ಜನರಿಗೆ ಹತ್ತಿರವಾಗಿವೆ. ವರನಟ ಡಾ. ರಾಜಕುಮಾರ ಅವರು ಓರ್ವ ಭಾವನಾಜೀವಿ ಆಗಿದ್ದರು ಎಂದು ಪದ್ಮಶ್ರೀ ಪುರಸ್ಕøತ ಹಿರಿಯ ಹಿಂದೂಸ್ತಾನಿ ಗಾಯಕರಾದ ಪಂಡಿತ ಡಾ.ಎಂ.ವೆಂಕಟೇಶಕುಮಾರ ಅವರು ಹೇಳಿದರು.
ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಂಗಾಯಣ ಧಾರವಾಡ ಇವರ ಸಹಯೋಗದಲ್ಲಿ ಡಾ.ರಾಜಕುಮಾರ ಅವರ 97 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಸಿನಿಮಾ ಹಾಡು ಮತ್ತು ಶಾಸ್ತ್ರೀಯ ಸಂಗೀತ ಯಾವುದು ಮೇಲು ಕೀಳು ಎಂಬುದು ಇಲ್ಲ. ಡಾ.ರಾಜಕುಮಾರ ಅವರು ಬಹಳ ಕಷ್ಟದಿಂದ ಬಂದವರು. ಬಹುತೇಕರು ರಾಜಕುಮಾರ ಅವರಿಗೆ ನಟನೆ ಮಾಡಲು ಬರುವುದಿಲ್ಲ ಎಂದು ಅವಮಾನಿಸಿದ್ದಾರೆ. ಡಾ.ರಾಜಕುಮಾರ ಅವರು ಅಭಿನಯದ ಅರ್ಧ ಜೀವನದ ನಂತರ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಪಿ.ಬಿ.ಶ್ರೀನಿವಾಸ ಅವರ ಧ್ವನಿ ಡಾ.ರಾಜಕುಮಾರ ಅವರ ಧ್ವನಿಗೆ ಹೋಲುತ್ತಿತ್ತು. ಹೀಗಾಗಿ ರಾಜಕುಮಾರ ಅವರ ಸಾಕಷ್ಟು ಸಿನಿಮಾಗಳ ಹಾಡುಗಳನ್ನು ಪಿ.ಬಿ.ಶ್ರೀನಿವಾಸ ಅವರು ಹಾಡಿದ್ದಾರೆ. ಡಾ.ರಾಜಕುಮಾರ ಅವರ ಸಿನಿಮಾಗಳು ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದವು ಎಂದರು.
ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಬೇಕು. ಗುರುಗಳು, ಹಿರಿಯರು ಎಲ್ಲರಿಗೂ ಗೌರವ ಸಲ್ಲಿಸುವುದನ್ನು ರೂಢಿಸಿಕೊಳ್ಳಿ. ಜೀವನದಲ್ಲಿ ಏನಾದರೂ ಸಾಧಿಸುವ ಗುರಿಯನ್ನು ಇಟ್ಟುಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲಿ ಯಾವತ್ತೂ ಹಿಂದೆ ಉಳಿಯಬಾರದು. ಸತತ ಪ್ರಯತ್ನ ಮಾಡಿದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯ.
ಭಾವನೆಗಳು ಇಲ್ಲದ ಸಂಗೀತವಿಲ್ಲ. ಹಾಡುಗಳಿಗೆ ಭಾವನೆಗಳು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa