


ಬಳ್ಳಾರಿ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ ನೀಡದೇ ಮಹಿಳೆಯರನ್ನು ತನ್ನ ರಾಜಕೀಯ ಸ್ವಹಿತಾಸಕ್ತಿಗಾಗಿ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಿರುವುದನ್ನು ಸ್ಪಷ್ಟಪಡಿಸಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆಯಲ್ಲಿ ಗುರುವಾರ ಮಾತನಾಡಿದ ಅವರು, ಮಹಿಳಾ ಸಬಲೀಕರಣ, ಮಹಿಳಾ ರಾಜಕೀಯ ಪ್ರಾತಿನಿಧ್ಯತ್ವಕ್ಕೆ ಮಹಿಳಾ ಮೀಸಲು ಕಾಯ್ದೆ ಪೂರಕವಾಗಿತ್ತು. ಶೇ. 33 ರಷ್ಟು ಮಹಿಳಾ ಮೀಸಲಾತಿ ದೇಶದ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷ ಈ ಮಹತ್ವದ ಮಸೂದೆಯನ್ನು ವಿರೋಧಿಸಿ ಮಹಿಳಾ ವಿರೋಧಿ ನಿಲುವನ್ನು ತೋರಿದೆ. ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿ ಮಹಿಳೆಯರನ್ನು ಕೇವಲ ಅಡುಗೆ ಮನೆಗೆ ಸೀಮಿತಗೊಳಿಸಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೆರರಿಸ್ಟ್ ಎಂದು ಕರೆಯುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ದೇಶದ ರಾಜಕೀಯ ಸಂಸ್ಕøತಿಗೆ ಧಕ್ಕೆಯನ್ನು ತಂದಿವೆ. ಮಲ್ಲಿಕಾರ್ಜುನ ಖರ್ಗೆಯವರು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಬೇಕಿತ್ತು ಎಂದರು.
ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಎಸ್. ಗುರುಲಿಂಗನಗೌಡ, ಕಾರ್ಪೊರೇಟರ್ ಗುಡಿಗಂಟಿ ಹನುಮಂತ, ವೆಂಕಟರಾಮಿರೆಡ್ಡಿ, ಹನುಮಂತಪ್ಪ, ಉಜ್ವಲ ಶ್ರೀಧರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್