ಹವಾಮಾನ : ಕೃಷಿ ಇಲಾಖೆಯಿಂದ ಸಲಹೆ
ಕೊಪ್ಪಳ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಇವರ ಮುನ್ಸೂಚನೆಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳವರೆಗೆ ಭಾಗಶಃ ಮೋಡಕವಿದ
ಹವಾಮಾನ : ಕೃಷಿ ಇಲಾಖೆಯಿಂದ ಸಲಹೆ


ಕೊಪ್ಪಳ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹವಾಮಾನ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯಿಂದ ಪ್ರಮುಖ ಸಲಹೆಗಳನ್ನು ನೀಡಲಾಗಿದೆ.

ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಇವರ ಮುನ್ಸೂಚನೆಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳವರೆಗೆ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 39 ರಿಂದ 40'ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 24 ರಿಂದ 25'ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಗರಿಷ್ಠ ಆರ್ದ್ರತೆ 61–63% ಮತ್ತು ಕನಿಷ್ಠ ಆರ್ದ್ರತೆ 27 ರಿಂದ 29% ಇರಬಹುದು. ಗಾಳಿಯ ವೇಗವು ಗಂಟೆಗೆ 4.0 ರಿಂದ 6.0 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

ಈ ಮುನ್ಸೂಚನೆಯ ಪ್ರಕಾರ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ಶಾಖ ಅಲೆ ವಿರುದ್ಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತಾಪಮಾನ ಏರಿಕೆಯಿಂದ ಕೀಟಬಾಧೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಬೆಳಗಿನ ಜಾವದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಉಳುಮೆ ಮಾಡಲು ಹದ ಸಿಗುತ್ತದೆ. ಜಮೀನನ್ನು ಸಮತಟ್ಟಾಗಿಸಿ, ಹದ ಸಿಕ್ಕಾಗ ಉಳುಮೆ ಮಾಡಿದರೆ ಮಣ್ಣು ಸಡಿಲವಾಗಿ ಮಳೆ ನೀರು ಭೂಮಿಯಲ್ಲೇ ಇಂಗುತ್ತದೆ. ಇದರಿಂದ ಹೆಚ್ಚುವರಿ ಮಳೆಯ ಸಮಯದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ.

ಹಿಂಗಾರು ಹಂಗಾಮಿನ ಬೆಳೆಗಳನ್ನು ಕಟಾವು ಮಾಡಿದ ನಂತರ ಭೂಮಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಮಳೆ ಬಂದರೆ, ಹಸಿಯಾದ ಮಣ್ಣನ್ನು ಟ್ರ್ಯಾಕ್ಟರ್ ಅಥವಾ ನೇಗಿಲಿನಿಂದ ಇಳಿಜಾರಿಗೆ ಅಡ್ಡವಾಗಿ ಉಳುಮೆ ಮಾಡಬೇಕು.

ಮಾಗಿ ಉಳುಮೆಯ ಪ್ರಯೋಜನಗಳು: ಮಣ್ಣು ಸಡಿಲವಾಗುವುದರಿಂದ ಮಳೆ ನೀರು ಭೂಮಿಯಲ್ಲಿ ಹೆಚ್ಚು ಇಂಗುತ್ತದೆ. ಬೆಳೆ ಅವಶೇಷಗಳು ಮಣ್ಣಿನಲ್ಲಿ ಬೆರೆತು ಸಾವಯವ ಗೊಬ್ಬರವಾಗುತ್ತವೆ. ಕೀಟಗಳು ಮತ್ತು ರೋಗಕಾರಕ ಜೀವಿಗಳು ಸೂರ್ಯನ ತಾಪಕ್ಕೆ ನಾಶವಾಗುತ್ತವೆ.

ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಹುದು ಹಾಗೂ ನೀರು ಜಮೀನಿನಲ್ಲೇ ಉಳಿಯುತ್ತದೆ. ಕರಕೆ ಮತ್ತು ಜೇಕೆ ಮೊದಲಾದ ಬಹುವಾರ್ಷಿಕ ಕಳೆಗಳನ್ನು ನಿಯಂತ್ರಿಸಬಹುದು.

ಈ ಪ್ರಯೋಜನಗಳನ್ನು ಪಡೆಯಲು ಮಧ್ಯಮದಿಂದ ಆಳವಾದ ಕಪ್ಪು ಮಣ್ಣಿನಲ್ಲಿ ಪ್ರತಿ 2 ರಿಂದ 3 ವರ್ಷಕ್ಕೊಮ್ಮೆ ಹಾಗೂ ಕೆಂಪು ಅಥವಾ ಮಿಶ್ರಿತ ಕಪ್ಪು ಮಣ್ಣಿನಲ್ಲಿ ಪ್ರತಿ ವರ್ಷ ಆಳವಾದ ಮಾಗಿ ಉಳುಮೆ ಮಾಡುವುದು ಸೂಕ್ತ.

ಉಷ್ಣಾಂಶ ಹೆಚ್ಚುತ್ತಿರುವುದರಿಂದ ಮತ್ತು ಮಳೆಯ ಕೊರತೆಯಿಂದ, ಬೆಳೆಗಳ ಸುತ್ತ ಮಲ್ಚಿಂಗ್ ಮಾಡಿ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಬೇಕು.

ಹಿಂಗಾರು ಬೆಳೆ ಕಟಾವಿನ ನಂತರ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಮಣ್ಣಿನ ಮಾದರಿಯನ್ನು ಸಂಗ್ರಹಿಸುವಾಗ ಬದುವಿನ ಮಣ್ಣು, ಅತಿಯಾಗಿ ಹಸಿ ಮಣ್ಣು ಅಥವಾ ಮಳೆಯಾದ ತಕ್ಷಣದ ಮಣ್ಣು ಬಳಸಬಾರದು.

ಬೆಳೆ ಅವಶೇಷಗಳನ್ನು ಸುಡದೇ, ಅವನ್ನು ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ತಯಾರಿಸಲು ಬಳಸಬೇಕು. ಉಗ್ರಾಣ ಕೀಟಗಳ ಹಾನಿ ತಪ್ಪಿಸಲು ಧಾನ್ಯಗಳಲ್ಲಿ 11 ರಿಂದ 12% ತೇವಾಂಶ, ದ್ವಿದಳ ಧಾನ್ಯಗಳಲ್ಲಿ 8% ಮತ್ತು ಎಣ್ಣೆ ಬೀಜಗಳಲ್ಲಿ 9% ತೇವಾಂಶವನ್ನು ಕಾಯ್ದುಕೊಳ್ಳಬೇಕು.

ಭತ್ತದ ಬೆಳೆಗೆ ಸಂಬಂಧಿಸಿದಂತೆ, ಕೊಯ್ಲಿಗೆ ಮುನ್ನ ಹೊಲದಿಂದ ನೀರನ್ನು ಹೊರಹಾಕಬೇಕು. ಕೊಯ್ಲು ಹಂತದಲ್ಲಿದ್ದರೆ ಸಂಯೋಜಿತ ಕೊಯ್ಲು ಯಂತ್ರಗಳನ್ನು ಬಳಸುವುದು ಉತ್ತಮ. ಭತ್ತದ ಒಣ ಹುಲ್ಲಿನ ನಿರ್ವಹಣೆಗೆ ಬೇಲರ್ ಉಪಕರಣ ಬಳಸಬೇಕು. ಯಾವುದೇ ಕಾರಣಕ್ಕೂ ಭತ್ತದ ಒಣ ಹುಲ್ಲನ್ನು ಬೆಂಕಿ ಹಚ್ಚಿ ಸುಡಬಾರದೆಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಕೃಷಿ ವಿಸ್ತರಣ ಘಟಕ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಟಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande