


ಸಿರುಗುಪ್ಪ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಆಂಜನೇಯಸ್ವಾಮಿ ದೇವಾಲಯಗಳು ಹೆಚ್ಚಾಗಿ ಕಂಡು ಬರುತ್ತವೆ. ಆಂಜನೇಯಸ್ವಾಮಿ ದೇವಾಲಯವು ಈ ಪ್ರದೇಶದ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕøತಿಕ ಗುರುತಿನ ಕೇಂದ್ರ ಬಿಂದುಗಳಾಗಿವೆ. ಈ ಹಿನ್ನೆಲೆಯಲ್ಲಿ ಆಂಜನೇಯಸ್ವಾಮಿಯ ಭಕ್ತರೇ ನಿರ್ಮಿಸುತ್ತಿರುವುದು ವಿಶೇಷವಾಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೊಂಚಗೇರಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನೆ ಹಾಗೂ ಶ್ರೀ ನಾಗದೇವತೆಯ ಪ್ರತಿಷ್ಠಾಪನೆ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಿತು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಎಮ್ಮಿಗನೂರಿನ ಶ್ರೀ ಹಂಪಿ ಸಾವಿರ ದೇವರ ಮಹಾಂತರಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ, ನಾಗದೇವತೆ ಪ್ರಾಣಪ್ರತಿಷ್ಠಾನೆ ನೆರವೇರಿಸಿದರು. ನೇತೃತ್ವವನ್ನು ಕುರುಗೋಡಿನ ಕೊಟ್ಟೂಸ್ವಾಮಿ ಶಾಖಾ ಮಠದ ಶ್ರೀನಿರಂಜನಪ್ರಭು ಮಹಾಸ್ವಾಮಿಗಳು, ಸೋಮಸಮುದ್ರದ ಕೊಟ್ಟೂರುಸ್ವಾಮಿ ಶಾಖಾ ಮಠದ ಶ್ರೀಸಿದ್ದಲಿಂಗಮಹಾಸ್ವಾಮಿಗಳು, ಶ್ರೀಧರಗಡ್ಡೆ ಗ್ರಾಮದ ಶ್ರೀಕೊಟ್ಟೂರು ಸ್ವಾಮಿ ಶಾಖಾ ಮಠದ ಶ್ರೀ ಮರಿಕೊಟ್ಟೂರು ದೇವರು, ಕೊಂಚಗೇರಿಯ ಶಿವಪ್ಪ ತಾತನವರು, ಸಿಂಧಿಗೇರಿಯ ಶಿವಾನಂದ ಶರ್ಮ, ವೀರಾಪುರದ ಜಗದೀಶ ತಾತನವರು ಮುಂತಾದವರು ವಹಿಸಿದ್ದರು.
ಶ್ರೀ ದಕ್ಷಿಣಕಾಶಿ ಎಂದು ಪ್ರಸಿದ್ಧವಾದ ಆನೆಗುಂದಿಯ ಶ್ರೀ ಆಂಜನೇಯ ಸ್ವಾಮಿಯ ಜನ್ಮಸ್ಥಳವಾದ ಶ್ರೀ ಅಂಜನಾದ್ರಿ ಪರ್ವತದಿಂದ ಗಂಗೋದಕ ಹಾಗೂ ಜ್ಯೋತಿಯನ್ನು ತರುವ ಕಾರ್ಯದೊಂದಿಗೆ ಪೂಜಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಪ್ರಥಮ ದಿವಸದಂದು ಶ್ರೀ ಗಂಗಾಪೂಜಾ, ಗೋಪೂಜೆ, ಗೌರಿಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ, ರಕ್ಷಾ ಬಂಧನ, ಪಂಗವ್ಯಪ್ರಾಸನ, ದೇವತಾ ಮಂಟಪರಾಧನೆ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ಎರಡನೆಯ ದಿನದಂದು ಸೋಮವಾರ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಸುಮಂಗಲೆಯರಿಂದ 108 ಕಳಸ ಮತ್ತು 108 ಕುಂಭದೊಂದಿಗೆ ಮಂಗಳ ವಾದ್ಯದೊಂದಿಗೆ ಶ್ರೀ ಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ಹಾಗೂ ನೂತನ ಶ್ರೀ ನಾಗದೇವತೆ ಮೂರ್ತಿಗೆ ರುದ್ರಾಭಿಷೇಕ, ಕುಂಭಾಭಿಷೇಕ, ಅಷ್ಟೋತ್ತರ ನಾಮಾವಳಿ, ಜಯಾದಿಹೋಮ, ಬಲಿ, ಪೂರ್ಣಾಹುತಿ, ಮಹಾಮಂಗಳಾಋತಿ, ಪೂಜ್ಯರಿಂದ ಧರ್ಮೋಪದೇಶ ಹಾಗೂ ಸರ್ವರಿಗೂ ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಿತು.
ಈ ಪುಣ್ಯಮಯ ಕಾರ್ಯಕ್ರಮದಲ್ಲಿ ಕೊಂಚಗೇರಿ ಗ್ರಾಮದ ಭಕ್ತರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದು ಸರಳಾದೇವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಡಿ.ಗಂಗಣ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್