ಪರೀಕ್ಷೆ ತ್ಯಜಿಸಿ ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿ ಫಲಿತಾಂಶ ಅತ್ಯುತ್ತಮ
ಗದಗ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿ ಅವರ ಸಾಧನೆ ಇಂದು ರಾಜ್ಯದ ಗಮನ ಸೆಳೆದಿದೆ. ಬಡತನದ ನಡುವೆಯೂ ಶಿಕ್ಷಣದತ್ತ ಹೋರಾಡಿದ ಈ ವಿದ್ಯಾರ್ಥಿನಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 458 ಅಂಕಗಳನ್ನು ಪಡೆದು ಶೇ.
ಫೋಟೋ


ಗದಗ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ವಿದ್ಯಾರ್ಥಿನಿ ಪಲ್ಲವಿ ಹಳ್ಳಿಕೇರಿ ಅವರ ಸಾಧನೆ ಇಂದು ರಾಜ್ಯದ ಗಮನ ಸೆಳೆದಿದೆ. ಬಡತನದ ನಡುವೆಯೂ ಶಿಕ್ಷಣದತ್ತ ಹೋರಾಡಿದ ಈ ವಿದ್ಯಾರ್ಥಿನಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 458 ಅಂಕಗಳನ್ನು ಪಡೆದು ಶೇ.73ರಷ್ಟು ಫಲಿತಾಂಶ ಸಾಧಿಸಿದ್ದು, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

ಪಲ್ಲವಿ ಹಳ್ಳಿಕೇರಿ ಬರದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮನೆಯಲ್ಲಿನ ಆರ್ಥಿಕ ಸಂಕಷ್ಟ ತೀವ್ರವಾಗಿದ್ದ ಕಾರಣ, ಪರೀಕ್ಷೆಯ ದಿನವೇ ತನ್ನ ತಾಯಿಯ ಜೊತೆ ದ್ರಾಕ್ಷಿ ತೋಟಕ್ಕೆ ಕೂಲಿಗೆ ತೆರಳಿದ್ದಳು. ಈ ಸಂಗತಿ ತಿಳಿದ ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಗಂಗಾಧರ ಅಣ್ಣಿಗೇರಿ ಅವರು ತಕ್ಷಣವೇ ತೋಟಕ್ಕೆ ತೆರಳಿ, ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿಯನ್ನು ಮನವೊಲಿಸಿದರು.

ಶಿಕ್ಷಣದ ಮಹತ್ವವನ್ನು ವಿವರಿಸಿ, ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿದ ಬಿಇಓ ಅವರು, ಪಲ್ಲವಿಯನ್ನು ಮರಳಿ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಪರೀಕ್ಷೆ ಬರೆಯುವಂತೆ ಮಾಡಿದರು. ಅವರ ಈ ಮಾನವೀಯ ಕಾರ್ಯ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು.

ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಹಾಗೂ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ ಕುಮಾರ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಬಿಇಓ ಕಾರ್ಯವನ್ನು ಶ್ಲಾಘಿಸಿದ್ದರು.

ಇದೀಗ ಪಲ್ಲವಿ ಹಳ್ಳಿಕೇರಿ ಅವರು 458 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದು, ಆಕೆಯ ಹಠ ಹಾಗೂ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿನಿಯ ಸಾಧನೆಯನ್ನು ಮೆಚ್ಚಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಗೌರವಿಸಲಾಯಿತು.

ಬಡತನದ ನಡುವೆಯೂ ಶಿಕ್ಷಣದ ಮೇಲಿನ ಆಸಕ್ತಿ, ಸರಿಯಾದ ಮಾರ್ಗದರ್ಶನ ಹಾಗೂ ಅಧಿಕಾರಿಗಳ ಸಕಾಲಿಕ ಹಸ್ತಕ್ಷೇಪ ಇದ್ದರೆ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಪಲ್ಲವಿ ಹಳ್ಳಿಕೇರಿ ಜೀವಂತ ಉದಾಹರಣೆಯಾಗಿದ್ದಾಳೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande