
ಗದಗ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆ 95.24% ರಷ್ಟು ಪ್ರಗತಿ ದಾಖಲಿಸಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯು 16ನೇ ಸ್ಥಾನ ಪಡೆದಿದೆ.
ಈ ವರ್ಷದ ಫಲಿತಾಂಶದಲ್ಲಿ ಜಿಲ್ಲೆಯ ಒಟ್ಟು 14612 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 13916 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಫಲಿತಾಂಶ ಪ್ರಮಾಣ 95.24% ಆಗಿದ್ದು, ಇದು ರಾಜ್ಯದ ಸರಾಸರಿ 91.60% ಕ್ಕಿಂತ ಹೆಚ್ಚಾಗಿದೆ.
ಲಿಂಗವಾರು ಫಲಿತಾಂಶವನ್ನು ಗಮನಿಸಿದರೆ, ಗಂಡು ವಿದ್ಯಾರ್ಥಿಗಳಲ್ಲಿ 7028 ಮಂದಿ ಹಾಜರಾಗಿದ್ದು, 6508 ಮಂದಿ ಉತ್ತೀರ್ಣರಾಗಿದ್ದಾರೆ (92.60%). ಹೆಣ್ಣು ವಿದ್ಯಾರ್ಥಿಗಳಲ್ಲಿ 7584 ಮಂದಿ ಹಾಜರಾಗಿದ್ದು, 7408 ಮಂದಿ ಉತ್ತೀರ್ಣರಾಗಿದ್ದಾರೆ (97.68%). ಇದರ ಮೂಲಕ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಮತ್ತೊಮ್ಮೆ ಉತ್ತಮ ಸಾಧನೆ ತೋರಿದ್ದಾರೆ.
ಜಿಲ್ಲೆಯ 316 ಪ್ರೌಢಶಾಲೆಗಳ ಪೈಕಿ 125 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿರುವುದು ವಿಶೇಷ. ಕೇವಲ ಒಂದು ಶಾಲೆಯಲ್ಲಿ ಮಾತ್ರ 60% ಕ್ಕಿಂತ ಕಡಿಮೆ ಫಲಿತಾಂಶ ಕಂಡುಬಂದಿದೆ. ಇದು ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ತೋರಿಸುತ್ತದೆ.
ಜಿಲ್ಲಾ ಮಟ್ಟದ ಮೆರು ಸಾಧಕರಲ್ಲಿ ರೋಣ ತಾಲೂಕಿನ ಇಟಗಿ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ್ ಇರಪ್ಪ ಸೋಬಗಿನ 622 ಅಂಕ (99.52%) ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂಡರಗಿ ತಾಲೂಕಿನ ಸಂದ್ಯಾ ಭೋಜಪ್ಪ ಲಮಾಣಿ 621 ಅಂಕ (99.36%) ಪಡೆದು ದ್ವಿತೀಯ ಸ್ಥಾನ ಪಡೆದಿದ್ದು, ಸುಷ್ಮಾ ತವರೆಪ್ಪ ನಾಯಕ್ ಹಾಗೂ ರೇವಂತ್ ರೆಡ್ಡಿ ನಾಗರಾಜ್ ಇಬ್ಬರೂ 620 ಅಂಕ (99.20%) ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಗ್ರೇಡ್ವಾರು ವಿಶ್ಲೇಷಣೆಯಲ್ಲಿ A+ ದರ್ಜೆಯಲ್ಲಿ 994 ವಿದ್ಯಾರ್ಥಿಗಳು (7.14%), A ದರ್ಜೆಯಲ್ಲಿ 2258 (16.23%), B+ ದರ್ಜೆಯಲ್ಲಿ 2550 (18.32%), B ದರ್ಜೆಯಲ್ಲಿ 2839 (20.40%), C+ ದರ್ಜೆಯಲ್ಲಿ 2631 (18.91%) ಹಾಗೂ C ದರ್ಜೆಯಲ್ಲಿ 2644 (19.00%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲೂಕುವಾರು ಫಲಿತಾಂಶದಲ್ಲಿ ಮುಂಡರಗಿ ತಾಲೂಕು 97.47% ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಶಿರಹಟ್ಟಿ (96.31%) ದ್ವಿತೀಯ ಸ್ಥಾನದಲ್ಲಿದೆ. ಗದಗ ಗ್ರಾಮೀಣ (95.65%), ನರಗುಂದ (95.55%), ರೋಣ (94.51%) ಹಾಗೂ ಗದಗ ನಗರ (92.80%) ಕ್ರಮವಾಗಿ ಮುಂದುವರಿದಿವೆ.
ಮಾಧ್ಯಮವಾರು ಫಲಿತಾಂಶದಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು 97.78% ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿದ್ದು, ಕನ್ನಡ ಮಾಧ್ಯಮದಲ್ಲಿ 94.56% ಹಾಗೂ ಉರ್ದು ಮಾಧ್ಯಮದಲ್ಲಿ 90.79% ಫಲಿತಾಂಶ ದಾಖಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಹೋಲಿಕೆಯಲ್ಲಿ ಗ್ರಾಮೀಣ ಹೆಣ್ಣು ವಿದ್ಯಾರ್ಥಿಗಳು 97.91% ಸಾಧನೆ ಮಾಡಿದ್ದು, ನಗರ ಹೆಣ್ಣು ವಿದ್ಯಾರ್ಥಿಗಳು 96.70% ಫಲಿತಾಂಶ ದಾಖಲಿಸಿದ್ದಾರೆ.
ಪ್ರಮುಖಾಂಶಗಳು:
ಒಟ್ಟು ಹಾಜರಾತಿ: 14612
ಉತ್ತೀರ್ಣರು: 13916
ಫಲಿತಾಂಶ: 95.24%
100% ಫಲಿತಾಂಶ ಶಾಲೆಗಳು: 125
ರಾಜ್ಯ ಸರಾಸರಿ: 91.60%
ಒಟ್ಟಾರೆ, ಗದಗ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶವು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಶಿಕ್ಷಣ ಇಲಾಖೆಯ ಸಮರ್ಪಿತ ಕಾರ್ಯದ ಫಲವಾಗಿ ಹೊರಹೊಮ್ಮಿದ್ದು, ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡುವಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP