ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ ; ಬಾಲಕಿಯರ ಮೇಲುಗೈ ಮುಂದುವರಿಕೆ
625ಕ್ಕೆ 625 ಅಂಕ ಪಡೆದ 7 ವಿದ್ಯಾರ್ಥಿಗಳು • ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ
ಶಿಕ್ಷಣ ಸಚಿವ ಮಧು ಬಂಗಾರಪ್ಪ


ಬೆಂಗಳೂರು, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಈ ಬಾರಿ ದಾಖಲೆ ಮಟ್ಟದ ಫಲಿತಾಂಶ ದಾಖಲಾಗಿದೆ. ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಈ ಬಾರಿ ಒಟ್ಟು 7,70,209 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,24,794 ಮಂದಿ ತೇರ್ಗಡೆಯಾಗಿದ್ದಾರೆ. ಇದರಿಂದ ಒಟ್ಟು ಪಾಸಾದ ಪ್ರಮಾಣ ಶೇ. 94.1 ಆಗಿದೆ ಎಂದು ಸಚಿವರು ತಿಳಿಸಿದರು.

ಪೂರ್ಣ ಅಂಕ ಪಡೆದ ಏಳು ವಿದ್ಯಾರ್ಥಿಗಳು

ರಾಜ್ಯದ ವಿವಿಧ ಜಿಲ್ಲೆಗಳ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ ಮತ್ತು ರಾಯಚೂರಿನ ಸುಖದೇವ್ ಈ ಸಾಧನೆಗೈದಿದ್ದಾರೆ.

ಈ ಬಾರಿಯೂ ಬಾಲಕಿಯರೇ ಮತ್ತೆ ಮೇಲುಗೈ ಸಾಧಿಸಿದ್ದಾರೆ.

3,92,922 ಬಾಲಕಿಯರ ಪೈಕಿ 3,77,922 ಮಂದಿ ತೇರ್ಗಡೆಯಾಗಿದ್ದು, ಬಾಲಕಿಯರ ಪಾಸಾದ ಪ್ರಮಾಣ: ಶೇ. 96.18 ಆಗಿದೆ.

3,77,287 ಬಾಲಕರ ಪೈಕಿ 3,46,872 ಮಂದಿ ಪಾಸ್ ಆಗಿದ್ದು, ಬಾಲಕರ ಪಾಸಾದ ಪ್ರಮಾಣ: ಶೇ. 91.94 ಆಗಿದೆ.

ಉತ್ತಮ ಫಲಿತಾಂಶದ ಹಿನ್ನೆಲೆ ಈ ಬಾರಿ ಮೂರನೇ ಪರೀಕ್ಷೆ ನಡೆಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಎರಡನೇ ಪರೀಕ್ಷೆ ಮೇ 18ರಿಂದ 25ರವರೆಗೆ ನಡೆಯಲಿದೆ.

ಜಿಲ್ಲಾವಾರು ಫಲಿತಾಂಶ

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (ಶೇ. 98.40) ಪ್ರಥಮ ಸ್ಥಾನ ಪಡೆದಿದೆ.

ಉಡುಪಿ (98.18) ದ್ವಿತೀಯ, ಉತ್ತರ ಕನ್ನಡ (98.09) ತೃತೀಯ ಸ್ಥಾನ ಪಡೆದಿವೆ. ಹಾಸನ (97.51) ನಾಲ್ಕನೇ ಸ್ಥಾನದಲ್ಲಿದ್ದು ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande