
ಧಾರವಾಡ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವರ ದೈನಂದಿನ ಶ್ರಮವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರವಹಿಸಿದ್ದರೂ, ಅದು ಮಾನವ–ಮಾನವ ಹಾಗೂ ಮಾನವ–ಪ್ರಕೃತಿ ನಡುವಿನ ಸಂಬಂಧಗಳಲ್ಲಿಯೂ ಆಳವಾದ ಬದಲಾವಣೆಗಳನ್ನು ತಂದಿದೆ ಎಂದು ಇಸ್ರೋ ನಿಕಟ ಪೂರ್ವ ಅಧ್ಯಕ್ಷ ಎ.ಎಸ್. ಕಿರಣಕುಮಾರ್ ಅಭಿಪ್ರಾಯಪಟ್ಟರು.
ಇಂದು ಕರ್ನಾಟಕ ವಿಶ್ವವಿದ್ಯಾಲಯಯ 75ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡುತ್ತಾ ಅವರು ಮಾತನಾಡಿದರು. ಮಾನವ ಈಗ ಭೂಮಿಯಾಚೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿದ್ದು, ಸಮೀಪದ ಗ್ರಹಗಳಲ್ಲಿ ವಾಸಸ್ಥಾನ ನಿರ್ಮಾಣದ ಪ್ರಯತ್ನಗಳತ್ತ ಸಾಗುತ್ತಿದ್ದಾನೆ ಎಂದು ಹೇಳಿದರು.
ಹಿಂದೆ ಬದಲಾವಣೆಯ ವೇಗ ನಿಧಾನವಾಗಿದ್ದರಿಂದ ಜನರಿಗೆ ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತಿತ್ತು. ಆದರೆ ಇಂದಿನ ವೇಗದ ಬದಲಾವಣೆಗಳು ವ್ಯಕ್ತಿಗಳು, ಸಮುದಾಯಗಳು ಮತ್ತು ರಾಷ್ಟ್ರಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೊಸ ಸವಾಲುಗಳನ್ನು ಚಾತುರ್ಯ ಹಾಗೂ ಧೈರ್ಯದಿಂದ ಎದುರಿಸಲು ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಜೀವನದ ಮುಂದಿನ ಹಂತಕ್ಕೆ ಸಿದ್ಧಗೊಳಿಸುವ ಸಾಧನವಾದರೂ, ಜೀವನದ ಅನುಭವವೇ ಅದರ ನಿಜವಾದ ಮೌಲ್ಯವನ್ನು ತೋರಿಸುತ್ತದೆ. ಜಾಗತಿಕ ಮಟ್ಟದಲ್ಲಿಯೂ ಸಮರ್ಪಕ ಶಿಕ್ಷಣ ಒದಗಿಸುವುದು ದೊಡ್ಡ ಸವಾಲಾಗಿದ್ದು, ತಂತ್ರಜ್ಞಾನದ ವೇಗದ ಬೆಳವಣಿಗೆ ಇದನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂದು ಹೇಳಿದರು.
ಮಾನವರಲ್ಲಿ ಹೊಸ ಸಾಧನಗಳನ್ನು ಬಳಸುವ ಸ್ವಾಭಾವಿಕ ಆಸಕ್ತಿ ಇದ್ದರೂ, ವೇಗದ ಬದಲಾವಣೆಗಳಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಆದ್ದರಿಂದ, ತಂತ್ರಜ್ಞಾನದ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯವನ್ನು ಸಮಾಜ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಭಾರತವು ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಸ್ವಾತಂತ್ರ್ಯದ 100ನೇ ವರ್ಷಕ್ಕೆ ಮೊದಲ ಸ್ಥಾನಕ್ಕೇರಲು ಗುರಿ ಹೊಂದಿದೆ. ಸಂವಹನ, ಹವಾಮಾನ ಮೇಲ್ವಿಚಾರಣೆ, ನಾವಿಗೇಶನ್ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಅಂತರಿಕ್ಷ ತಂತ್ರಜ್ಞಾನದ ಬಳಕೆ ಮಹತ್ವದ್ದಾಗಿದೆ ಎಂದು ಹೇಳಿದರು.
ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಮಾತನಾಡಿ, ವಿಶ್ವವಿದ್ಯಾಲಯವು ಕೆಲವು ಹಣಕಾಸು ಸವಾಲುಗಳನ್ನು ಎದುರಿಸುತ್ತಿದ್ದರೂ ಸರ್ಕಾರದಿಂದ ಪಿಂಚಣಿ ಸೇರಿದಂತೆ ಹಲವು ನೆರವು ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣ, ಇಂಟರ್ನ್ಶಿಪ್ ಹಾಗೂ ವಿದ್ಯಾರ್ಥಿನಿಯರಿಗೆ ವಿಶೇಷ ಶಿಷ್ಯವೇತನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಯುವಕರಿಗೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ಒತ್ತಿಹೇಳಿದರು. ಡಿಜಿಟಲ್ ಯುಗದಲ್ಲಿ ಜ್ಞಾನವೃದ್ಧಿ ಅಗತ್ಯವಾಗಿದ್ದು, ವಿಫಲತೆ ಯಶಸ್ಸಿನ ಭಾಗವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ಕೊಡುಗೆ ನೀಡಿದ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅಚ್ಯುತ ಸಾಮಂತ, ಜಿ.ಎಸ್. ಸಂಗ್ರೇಶಿ ಹಾಗೂ ಜಿತೇಂದ್ರ ಡಿ. ಮಜೆಥಿಯಾ ಅವರಿಗೆ ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa