ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ
ಗದಗ, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆ, ಡಂಬಳ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ “ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ – ಏಪ್ರಿಲ್ 2026” ಕಾರ್ಯಕ್ರಮ ಭಾರೀ ಯಶಸ್ವಿಯಾಗ
ಫೋಟೋ


ಗದಗ, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆ, ಡಂಬಳ ಇವರ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ “ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ – ಏಪ್ರಿಲ್ 2026” ಕಾರ್ಯಕ್ರಮ ಭಾರೀ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ವಿವಿಧ ಭಾಗಗಳಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳವನ್ನು ಸದುಪಯೋಗಪಡಿಸಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾದ ಶ್ರೀ ಶಿವಾನಂದ ಎಸ್. ಪಟ್ಟಣಶೆಟ್ಟರ ಅವರು, ಶಿಶಿಕ್ಷು ಮೇಳಗಳು ಯುವಕರಿಗೆ ಉದ್ಯೋಗದ ದಿಕ್ಕು ತೋರಿಸುವ ಮಹತ್ವದ ವೇದಿಕೆಗಳಾಗಿವೆ ಎಂದು ಹೇಳಿದರು. ಇಂತಹ ಮೇಳಗಳ ಮೂಲಕ ವಿದ್ಯಾರ್ಥಿಗಳು ಮತ್ತು ತರಬೇತಿದಾರರು ಕೈಗಾರಿಕೆಗಳೊಂದಿಗೆ ನೇರ ಸಂಪರ್ಕ ಸಾಧಿಸಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ಯುವಕರನ್ನು ಉದ್ಯೋಗಕ್ಷೇತ್ರಕ್ಕೆ ತರಬೇಕೆಂಬ ಮಹತ್ತರ ಉದ್ದೇಶದಿಂದ ಪೂಜ್ಯ ಲಿಂ. ಡಾ. ತೋಂಟದ ಸಿದ್ದಲಿಂಗ ಶ್ರೀಗಳು 1983ರಲ್ಲಿ ಆರು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಿದ ಬಗ್ಗೆ ಅವರು ಸ್ಮರಿಸಿದರು. ಈ ಸಂಸ್ಥೆಗಳು ಇಂದು ಸಾವಿರಾರು ಯುವಕರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ, ಸಮಾಜಕ್ಕೆ ಜವಾಬ್ದಾರಿಯುತ ನಾಗರಿಕರನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ರಿಯಾಜಹ್ಮದ ಬುಯ್ಯಾರ ಅವರು, ಐಟಿಐ ಶಿಕ್ಷಣದ ನಂತರ ಅಪ್ರೆಂಟಿಸಿಪ್ ತರಬೇತಿ ಅತ್ಯಂತ ಮುಖ್ಯವಾಗಿದ್ದು, ಉದ್ಯೋಗಕ್ಕೆ ಸೇರ್ಪಡೆಯಾಗಲು ಇದು ಉತ್ತಮ ಅವಕಾಶ ಒದಗಿಸುತ್ತದೆ ಎಂದು ತಿಳಿಸಿದರು. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮುಂಡರಗಿ ಪ್ರಾಚಾರ್ಯರಾದ ಶ್ರೀ ಚನಸಂಗಪ್ಪ ಗಡೇದ ಅವರು ಮಾತನಾಡಿ, ತರಬೇತಿದಾರರು ಉತ್ತಮ ಗುಣಮಟ್ಟದ ಕೌಶಲ್ಯಗಳನ್ನು ಅಳವಡಿಸಿಕೊಂಡು ಕಡ್ಡಾಯವಾಗಿ ಅಪ್ರೆಂಟಿಸಿಪ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕುರ್ತಕೋಟಿ ಪ್ರಾಚಾರ್ಯರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ ರಾಯನಗೌಡ ಗೌಡರ ಅವರು, ಯುವಕರು ಪಡೆದಿರುವ ಕೌಶಲ್ಯಗಳನ್ನು ಸಮರ್ಪಕವಾಗಿ ಬಳಸಿ ಹೊಸ ಉದ್ಯಮಗಳನ್ನು ಆರಂಭಿಸಿ ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಎಂದು ಪ್ರೇರೇಪಿಸಿದರು.

ಈ ಶಿಶಿಕ್ಷು ಮೇಳದಲ್ಲಿ ಒಟ್ಟು 15 ವಿವಿಧ ಕಂಪನಿಗಳು ಭಾಗವಹಿಸಿದ್ದವು. ಮೇಳದ ಅಂಗವಾಗಿ ಸುಮಾರು 584 ಅಭ್ಯರ್ಥಿಗಳು ಆನ್ಲೈನ್ ಮೂಲಕ ಹಾಗೂ 42 ಅಭ್ಯರ್ಥಿಗಳು ಆಫ್ಲೈನ್ ಮೂಲಕ ನೋಂದಣಿ ಮಾಡಿಸಿದ್ದರು. ಇದರ ಪೈಕಿ 332 ಅಭ್ಯರ್ಥಿಗಳು ಮೇಳಕ್ಕೆ ಹಾಜರಾಗಿ ವಿವಿಧ ಕಂಪನಿಗಳ ಸಂದರ್ಶನಗಳಲ್ಲಿ ಪಾಲ್ಗೊಂಡರು. ಇವರಲ್ಲಿ 235 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಮುಂದಿನ ಹಂತದ ನೇಮಕಾತಿಗೆ ಶಿಫಾರಸು ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಎಸ್.ಎಂ. ಶಿವರಾಚಯ್ಯ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಅಧಿಕಾರಿಗಳಾದ ಶ್ರೀ ಮಹೇಶಗೌಡ ಗೌಡರ ಅವರು ವಂದಿಸಿದರು. ಕಛೇರಿ ಅಧೀಕ್ಷಕರಾದ ಶ್ರೀ ರಮೇಶ ಕೊರ್ಲಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.

ಇದೇ ವೇಳೆ ಪ್ಲೇಸ್ಮೆಂಟ್ ಅಧಿಕಾರಿಗಳಾದ ಶ್ರೀ ಈಶ್ವರಪ್ಪ ದಾಸರ ಸೇರಿದಂತೆ ಕಿರಿಯ ತರಬೇತಿ ಅಧಿಕಾರಿಗಳಾದ ನಾಲತ್ವಡಮಠ, ಪಾಟೀಲ, ನಾಯಿಕ, ಯಾಳಗಿ, ಯಲಿಗಾರ, ಕುಂಬಾರ, ಇಲಕಲ್, ಗಿರೀಶ ಬಡಿಗೇರ, ಬಸವರಾಜ ಬಡಿಗೇರ, ಶಿವರಾಜ ಅಣ್ಣಿಗೇರಿ, ಕಬೂರಮಠ, ಚಟ್ಟೇರ, ಮದ್ದಾನಪ್ಪ ಹರಿಜನ, ನರೇಗಲ್, ಅಬ್ಬಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಟ್ಟಾರೆಯಾಗಿ, ಗದಗ ಜಿಲ್ಲೆಯಲ್ಲಿ ನಡೆದ ಈ ಶಿಶಿಕ್ಷು ಮೇಳ ಯುವಕರಿಗೆ ಉದ್ಯೋಗದ ದಿಕ್ಕು ತೋರಿಸುವ ಮಹತ್ವದ ವೇದಿಕೆಯಾಗಿದ್ದು, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡಿದ ಕಾರ್ಯಕ್ರಮವಾಗಿ ಪರಿಣಮಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande