
ಗದಗ, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮಳೆಗಾಲದ ಅಬ್ಬರದ ನಡುವೆಯೇ ಸಿಡಿಲಿನ ಆರ್ಭಟ ಹೆಚ್ಚುತ್ತಿದ್ದು, ಗದಗ ತಾಲೂಕಿನ ವಿವಿಧ ಭಾಗಗಳಲ್ಲಿ ಸಿಡಿಲು ಬಡಿದು 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಹೊರವಲಯದ ಜಾಲಿ ಕಂಟಿ ಬಳಿ ಕುರಿಗಳನ್ನು ನಿಲ್ಲಿಸಿದ್ದ ವೇಳೆ ಏಕಾಏಕಿ ಗುಡುಗು ಮಿಂಚಿನೊಂದಿಗೆ ಸಿಡಿಲು ಬಡಿದ ಪರಿಣಾಮ 20ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಈ ಕುರಿಗಳು ಹಾತಲಗೇರಿ ಗ್ರಾಮದ ಲಕ್ಷ್ಮಮ್ಮ ಕುರಬರ ಅವರಿಗೆ ಸೇರಿದವು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸುಮಾರು 3 ರಿಂದ 4 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇನ್ನೊಂದೆಡೆ, ಲಕ್ಕುಂಡಿ ಗ್ರಾಮದ ಜಂತ್ಲಿಪೀರಾ ದರ್ಗಾ ರಸ್ತೆಯಲ್ಲೂ ಇದೇ ರೀತಿಯ ಘಟನೆ ಸಂಭವಿಸಿದ್ದು, ಈರಪ್ಪ ಎಂಬುವವರಿಗೆ ಸೇರಿದ ನಾಲ್ಕು ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಒಂದೇ ದಿನದಲ್ಲಿ ಎರಡು ಕಡೆ ಸಂಭವಿಸಿದ ಸಿಡಿಲು ಅವಘಡಗಳು ಗ್ರಾಮೀಣ ಪ್ರದೇಶದ ಕುರಿಗಾಹಿಗಳಲ್ಲಿ ಭೀತಿ ಮೂಡಿಸಿವೆ.
ಈ ಘಟನೆಗಳು ಬೆಟಗೇರಿ ಬಡಾವಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ಪೊಲೀಸರು ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೀಡಿತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಳೆಗಾಲದಲ್ಲಿ ಸಿಡಿಲು ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP