
ಬೆಂಗಳೂರು, 23 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರ ನಿವಾಸಿಗಳಿಗೆ ಮಹತ್ವದ ಸಡಿಲಿಕೆ ನೀಡಿರುವ ಬೆಂಗಳೂರು ಜಲಮಂಡಳಿ , ಬಾಕಿ ಉಳಿದಿರುವ ನೀರಿನ ಬಿಲ್ ಪಾವತಿಗೆ ಏಕಕಾಲಿಕ ಸೆಟಲ್ಮೆಂಟ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಗ್ರಾಹಕರು ಅಸಲು ಮೊತ್ತವನ್ನು ಪಾವತಿಸಿದರೆ, ಅವರ ಮೇಲಿನ 100% ಬಡ್ಡಿಯನ್ನು ಮನ್ನಾ ಮಾಡುವುದಾಗಿ ಜಲಮಂಡಳಿ ಘೋಷಿಸಿದೆ.
ಜಲಮಂಡಳಿ ಪ್ರಕಟಣೆಯ ಪ್ರಕಾರ, ಈ ಯೋಜನೆಗೆ ಮೂರೂ ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿದ್ದು, ಈ ಅವಧಿಯಲ್ಲಿ ಬಾಕಿ ಬಿಲ್ಗಳನ್ನು ತೆರವುಗೊಳಿಸುವ ಗ್ರಾಹಕರು ಬಡ್ಡಿ ಭಾರದಿಂದ ಸಂಪೂರ್ಣ ಮುಕ್ತರಾಗಲಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿರುವ ಮನೆಮಾಲೀಕರು ಹಾಗೂ ವಾಣಿಜ್ಯ ಬಳಕೆದಾರರಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಹಲವಾರು ಗ್ರಾಹಕರು ಬಾಕಿ ಬಿಲ್ಗಳ ಮೇಲಿನ ಹೆಚ್ಚಿದ ಬಡ್ಡಿಯಿಂದ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆ, ಈ ರೀತಿಯ ಸಡಿಲಿಕೆ ಯೋಜನೆ ರೂಪಿಸಲಾಗಿದೆ. ಬಾಕಿ ಹಣ ವಸೂಲಿ ಹೆಚ್ಚಿಸುವ ಜೊತೆಗೆ ಸಾರ್ವಜನಿಕರಿಗೆ ಆರ್ಥಿಕ ಪರಿಹಾರ ಒದಗಿಸುವುದು ಇದರ ಉದ್ದೇಶವಾಗಿದೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಗದಿತ ಅವಧಿಯೊಳಗೆ ಬಿಲ್ ಪಾವತಿಸುವಂತೆ ಜಲಮಂಡಳಿ ಮನವಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa