
ಧಾರವಾಡ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯಲ್ಲಿನ ಕಳ್ಳಬಟ್ಟಿ, ನಕಲಿ ಮದ್ಯ ಹಾಗೂ ಹೊರರಾಜ್ಯಗಳಿಂದ ಅಕ್ರಮವಾಗಿ ಸಾಗಾಟವಾಗುವ ಮದ್ಯವನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಬಕಾರಿ ಇಲಾಖೆಯ ಸಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮದ್ಯ ಮಾರಾಟದ ವಿರುದ್ಧ ತೀವ್ರ ನಿಗಾವಹಿಸಬೇಕು ಎಂದರು. ಅಕ್ರಮ ಸಾರಾಯಿ ಮಾರಾಟದ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆ ತಪಾಸಣೆ ಕಾರ್ಯವನ್ನು ಮತ್ತಷ್ಟು ಬಲಪಡಿಸಿ, ಯಾವುದೇ ಸ್ಥಳದಲ್ಲಿ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಕಲಿ ಸಾರಾಯಿ ಹಾಗೂ ಕಳ್ಳಬಟ್ಟಿ ತಯಾರಿಕೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಹಿನ್ನೆಲೆಯಲ್ಲಿ, ಇವುಗಳ ನಿರ್ಮೂಲನೆಗೆ ವಿಶೇಷ ತಂಡಗಳನ್ನು ರಚಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಇಂತಹ ಮದ್ಯ ಸೇವನೆಯಿಂದ ಜನರ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಈ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿರುವ ಬಗ್ಗೆ ಗಮನ ಹರಿಸಿ, ಜಿಲ್ಲೆಯ ಗಡಿಭಾಗಗಳಲ್ಲಿ ತಪಾಸಣೆ ಕಠಿಣಗೊಳಿಸುವಂತೆ ಅವರು ಸೂಚಿಸಿದರು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ವಾಹನಗಳ ಪರಿಶೀಲನೆ ಹೆಚ್ಚಿಸಿ, ಸಂಶಯಾಸ್ಪದ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಕು ಎಂದರು.
ಉದ್ಯೋಗದ ಕೊರತೆ ಮತ್ತು ವ್ಯಸನದ ಪರಿಣಾಮದಿಂದ ಹಲವಾರು ಯುವಕರು ದುಶ್ಚಟಗಳಿಗೆ ಒಳಗಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳು, ಅರಿವು ಮೂಡಿಸುವ ಕಾರ್ಯಗಳು ಹಾಗೂ ಸಮಾಲೋಚನೆ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವ್ಯಸನಕ್ಕೆ ಒಳಗಾದ ಯುವಕರನ್ನು ಗುರುತಿಸಿ, ಅವರಿಗೆ ಸಮಾಲೋಚನೆ ಹಾಗೂ ಪುನರ್ವಸತಿ ಸೇವೆಗಳನ್ನು ಒದಗಿಸುವತ್ತ ಗಮನ ಹರಿಸಬೇಕು. ಕೇವಲ ದಂಡಾತ್ಮಕ ಕ್ರಮಗಳಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿಯ ದೃಷ್ಟಿಯಿಂದ ಅವರನ್ನು ಸರಿಯಾದ ದಾರಿಗೆ ತರುವ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯವಾಗಿದ್ದು, ಅಕ್ರಮ ಸಾರಾಯಿ ಮಾರಾಟ ಅಥವಾ ವ್ಯಸನ ಸಂಬಂಧಿತ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಅಬಕಾರಿ ಇಲಾಖೆಗೆ ತಿಳಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯವೆಂದರು.
ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಹಾಗೂ ಅದರ ಪರಿಣಾಮಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದರು. ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಬಳಕೆ, ಸಾಗಾಟ ಮತ್ತು ವಿತರಣೆಯ ಮೇಲೆ ನಿಗಾ ವಹಿಸಲಾಗುತ್ತಿದ್ದು, ಇಂತಹ ಕಾರ್ಯಗಳು ಇಲಾಖೆಗಳ ಪರಸ್ಪರ ಸಮನ್ವಯದಿಂದ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಮಾದಕ ವಸ್ತು ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಚಲನವಲನ, ಸಂಪರ್ಕ ವಲಯ ಹಾಗೂ ಆರ್ಥಿಕ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗುತ್ತಿದೆ ಎಂದರು. ಅವರ ವಿರುದ್ಧ ಅಗತ್ಯವಿದ್ದಲ್ಲಿ ತನಿಖೆ ನಡೆಸಿ, ದೊಡ್ಡ ಮಟ್ಟದ ಜಾಲವನ್ನು ಭೇದಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಬಕಾರಿ ಇಲಾಖೆಯ ಉಪ ಆಯುಕ್ತ ರಮೇಶಕುಮಾರ ಎಚ್. ಇಲಾಖೆಯಿಂದ ಕೈಗೊಂಡ ನಿಯಂತ್ರಣ ಕ್ರಮಗಳ ಬಗ್ಗೆ ವಿವರಿಸಿದರು. ಅಬಕಾರಿ ಅಧೀಕ್ಷಕ ಮಂಜುನಾಥ ಅರೆಗುಳ ಸಭೆಯನ್ನು ಸ್ವಾಗತಿಸಿ ವಂದಿಸಿದರು.
ಸಭೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಅಜಯ ಎನ್., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa