ಕೋಲಾರದ ಅಮ್ಮೇರಹಳ್ಳಿಯಲ್ಲಿ ಸಂಭ್ರಮದ ಉಚಿತ ಬೇಸಿಗೆ ಶಿಬಿರ
ಕೋಲಾರದ ಅಮ್ಮೇರಹಳ್ಳಿಯಲ್ಲಿ ಸಂಭ್ರಮದ ಉಚಿತ ಬೇಸಿಗೆ ಶಿಬಿರ
ಕೋಲಾರದ ಅಮ್ಮೇರಹಳ್ಳಿಯಲ್ಲಿ ಈನೆಲ ಈಜಲ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಂಭ್ರಮಿಸಿದರು.


ಕೋಲಾರ, ೨೨ ಏಪ್ರಿಲ್ (ಹಿ.ಸ) :

ಆ್ಯಂಕರ್ : ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳು ಮೊಬೈಲ್ ಮತ್ತು ಅಂತರ್ಜಾಲಕ್ಕೆ ಅಂಟಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಪರಿಚಯಿಸುತ್ತಿರುವ ಈ ಶಿಬಿರ ನಿಜಕ್ಕೂ ಅಭಿನಂದನೀಯ ಎಂದು ಗಮಕ ಮಹಿಳಾ ಸಮೂಹದ ಶಾಂತಮ್ಮ ತಿಳಿಸಿದರು.

ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಮ್ಮೇರಹಳ್ಳಿ ಡೈರಿ ಆವರಣದಲ್ಲಿ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ’ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಆಯೋಜಿಸಿರುವ ವಿಶೇಷ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಕೇವಲ ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಶಿಬಿರಗಳು ಮಕ್ಕಳಲ್ಲಿ ಸೃಜನಾತ್ಮಕತೆಯನ್ನು ಬೆಳೆಸುವುದಲ್ಲದೆ, ಅವರಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ನುಡಿಗಳನ್ನು ಆಡಿದರು.

ಏಪ್ರಿಲ್ ೧೬ ರಿಂದ ೩೦ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಮೊದಲ ದಿನವೇ ಮಕ್ಕಳ ಕಿಲಕಿಲ ಕಲರವ ಮತ್ತು ಸಾಂಸ್ಕೃತಿಕ ಸಂಭ್ರಮ ಮೇಳೈಸಿತ್ತು. ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಜೊತೆಗೆ ಜಾನಪದ ಗಾಯನ, ಜನಪದ ನೃತ್ಯ, ಕೋಲಾಟ ಹಾಗೂ ಮಣ್ಣಿನ ಬೊಂಬೆ ತಯಾರಿಕೆಯಂತಹ ವೈವಿಧ್ಯಮಯ ಕಲೆಗಳ ತರಬೇತಿ ನೀಡಲಾಗುತ್ತಿದೆ.

ಶಿಬಿರದ ಸಂಘಟಕರು ಹಾಗೂ ಜಾನಪದ ಗಾಯಕ ಬಿ. ವೆಂಕಟಾಚಲಪತಿ ಅವರು ಮಾತನಾಡಿ, ಮುಂದಿನ ಪೀಳಿಗೆಗೆ ನಮ್ಮ ದೇಶೀಯ ಕಲೆಗಳನ್ನು ಪರಿಚಯಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದ್ದು, ಏಪ್ರಿಲ್ ಅಂತ್ಯದವರೆಗೆ ಮಕ್ಕಳಿಗೆ ಕಲಿಕೆಯ ಜೊತೆಗೆ ಸೃಜನಾತ್ಮಕ ವೇದಿಕೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಬಲಾ ಕಲಾವಿದ ರಾಮಣ್ಣ ಮಾತನಾಡಿ, ಸಂಗೀತ ಮತ್ತು ಕಲೆಗಳು ಕೇವಲ ಮನೋರಂಜನೆಯಲ್ಲ. ಅವು ವ್ಯಕ್ತಿಯ ಶಿಸ್ತು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಸಾಧನಗಳಾಗಿವೆ. ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳು ಮೊಬೈಲ್ನಿಂದ ದೂರವಿದ್ದು ಇಂತಹ ದೇಶೀಯ ಕಲೆಗಳನ್ನು ಕಲಿಯುತ್ತಿರುವುದು ಸಂತಸದ ವಿಚಾರ ಎಂದು ಅಭಿಪ್ರಾಯಪಟ್ಟರು.

ಈ ಕಲಿಕಾ ಹಬ್ಬದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಸ್ಥಳೀಯ ಪೋಷಕರು ಈ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಾಂತಮ್ಮ, ಗಣೇಶಪ್ಪ ಎನ್., ವೆಂಕಟಲಕ್ಷö್ಮಮ್ಮ, ಗ್ರಾಮ ಮುಖಂಡರಾದ ನಾರಾಯಣಪ್ಪ, ಹನುಮಂತಪ್ಪ, ಶಂಕರಪ್ಪ, ವೆಂಕಟಾಚಲಪತಿ, ರಾಮಪ್ಪ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande