
ಬೀದರ್, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೀದರ್ ಜಿಲ್ಲೆಯ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ನಡೆದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಭಾಗವಹಿಸಿ ಮಾತನಾಡಿದರು.
ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಶರಣ ಸಂಸ್ಕೃತಿಯ ಅಮೂಲ್ಯ ಮೌಲ್ಯಗಳನ್ನು ಜನಮನಗಳಿಗೆ ತಲುಪಿಸುವಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ಶರಣ ಸಂಗಮ, ಶಿವಾನುಭವ ಪ್ರವಚನ, ವಚನ ಗಾಯನಗಳಂತಹ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಸವ ತತ್ವಗಳನ್ನು ಸಮರ್ಥವಾಗಿ ಪ್ರಸಾರ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಳ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡವರು ಸಾಲದ ಹೊರೆಗೀಡಾಗದಂತೆ ಮಾಡಿ, ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಬಿತ್ತುತ್ತಿದ್ದಾರೆ. ಅವರ ಸೇವಾ ಮನೋಭಾವ ಹಾಗೂ ಸಮಾಜಮುಖಿ ಚಿಂತನೆಗಳು ಎಲ್ಲರಿಗೂ ಮಾದರಿಯಾಗಿದೆ ಎಂದು ಸಚಿವರು ಹೇಳಿದರು.
ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ನೀಡಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯ ಅವರು ಅವರಿಗೆ “ನಾಡೋಜ” ಗೌರವ ನೀಡಿ ಸನ್ಮಾನಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಇಂತಹ ಮಹನೀಯರು ಸಮಾಜಕ್ಕೆ ದಿಕ್ಕು ತೋರಿಸುವ ದೀಪಸ್ತಂಭರಾಗಿದ್ದಾರೆ. ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಇನ್ನೂ ದೀರ್ಘಾಯುಷಿಯಾಗಿ ಆರೋಗ್ಯದಿಂದ ಎಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಹಾರೈಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa