
ಕೇದಾರನಾಥ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪೂಜೆಗಳ ಬಳಿಕ ಇಂದು ಬೆಳಿಗ್ಗೆ 8 ಗಂಟೆಗೆ ಕೇದಾರನಾಥ ಧಾಮದ ದ್ವಾರಗಳನ್ನು ಭಕ್ತರ ದರ್ಶನಕ್ಕೆ ತೆರೆಯಲಾಯಿತು. ದ್ವಾರ ತೆರೆದ ತಕ್ಷಣ ಇಡೀ ಧಾಮ “ಹರ್-ಹರ್ ಮಹಾದೇವ್” ಘೋಷಣೆಗಳಿಂದ ಮೊಳಗಿಬಿಟ್ಟಿತು. ಇದರೊಂದಿಗೆ ಈ ಸಾಲಿನ ಕೇದಾರನಾಥ ಯಾತ್ರೆಗೆ ಅಧಿಕೃತ ಚಾಲನೆ ದೊರೆಯಿತು.
ಈ ಬಾರಿ ದೇವಾಲಯವನ್ನು ಸುಮಾರು 51 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿತ್ತು. ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಧಾಮಕ್ಕೆ ಆಗಮಿಸಿ ಬಾಗಿಲು ತೆರೆಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಭಕ್ತರಿಗೆ ಶುಭಾಶಯ ಕೋರಿದರು.
ಮಂಗಳವಾರ ಸಂಜೆ ಗೌರಿಕುಂಡದಿಂದ ಹೊರಟ ಬಾಬಾ ಕೇದಾರ್ ಅವರ ಪಂಚಮುಖಿ ಚಲ ವಿಗ್ರಹದ ಡೋಲಿ ಸಂಜೆ 4.30ರ ಸುಮಾರಿಗೆ ಕೇದಾರನಾಥ ಧಾಮವನ್ನು ತಲುಪಿತು. ಓಂಕಾರೇಶ್ವರ ದೇವಾಲಯದಿಂದ ಸುಮಾರು 17 ಕಿಲೋಮೀಟರ್ ದೂರದ ಪಾದಯಾತ್ರೆಯ ಮೂಲಕ ಡೋಲಿ ಜಂಗಲ್ ಚಟ್ಟಿ, ರಾಮಬಾಡಾ, ಲಿಂಚೋಲಿ ಹಾಗೂ ಬೇಸ್ ಕ್ಯಾಂಪ್ ಮಾರ್ಗವಾಗಿ ಧಾಮವನ್ನು ಪ್ರವೇಶಿಸಿತು.
ಡೋಲಿ ದೇವಾಲಯ ಸಂಕೀರ್ಣವನ್ನು ತಲುಪಿದಾಗ ಸಾವಿರಾರು ಭಕ್ತರು ಹೂವಿನ ಮಳೆ ಸುರಿಸಿ “ಜೈ ಬಾಬಾ ಕೇದಾರ್” ಎಂದು ಘೋಷಣೆ ಕೂಗಿದರು. ಬಳಿಕ ಡೋಲಿ ದೇವಾಲಯವನ್ನು ಸುತ್ತುವರೆದು ಉಗ್ರಾಣ ಪ್ರವೇಶಿಸಿತು. ಅಲ್ಲಿ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಎಂಟನೇ ತರಬೇತಿ ರೆಜಿಮೆಂಟ್ ಬ್ಯಾಂಡ್ನ ಸುಮಧುರ ಸಂಗೀತ, ಡಮರು ಹಾಗೂ ವಾದ್ಯಗಳ ನಾದದಿಂದ ಇಡೀ ಧಾಮ ಶಿವಮಯವಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa