
ನವದೆಹಲಿ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಉಪ ರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಅಂಗವಾಗಿ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು.
ಪಹಲ್ಗಾಮ್ ದಾಳಿಯನ್ನು “ಹೇಡಿತನ ಮತ್ತು ಕ್ರೂರ ಕೃತ್ಯ” ಎಂದು ಬಣ್ಣಿಸಿದ ಸಿ. ಪಿ. ರಾಧಾಕೃಷ್ಣನ್, ದಾಳಿಯಲ್ಲಿ ಪ್ರಾಣ ಕಳೆದುಕೊಂಡವರು ದೇಶದ ಸಾಮೂಹಿಕ ಸ್ಮರಣೆಯಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದು ಹೇಳಿದರು. ದುಃಖಿತ ಕುಟುಂಬಗಳೊಂದಿಗೆ ದೇಶದ ಒಗ್ಗಟ್ಟನ್ನು ವ್ಯಕ್ತಪಡಿಸಿದ ಅವರು, ಇಂತಹ ಕೃತ್ಯಗಳು ಶಾಂತಿ, ಏಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದರು. ಭಯೋತ್ಪಾದನೆಯ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಹೋರಾಡುವ ಸಂಕಲ್ಪದಲ್ಲಿ ಭಾರತ ದೃಢವಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ, ಕಳೆದ ವರ್ಷ ಇದೇ ದಿನ ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಜನರಿಗೆ ಗೌರವ ಸಲ್ಲಿಸಿದರು. ಸಂತ್ರಸ್ತರನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಹೇಳಿದ ಅವರು, ದುಃಖಿತ ಕುಟುಂಬಗಳೊಂದಿಗೆ ದೇಶ ಸದಾ ನಿಂತಿರುತ್ತದೆ ಎಂದು ಪುನರುಚ್ಚರಿಸಿದರು.
ಈ ದುಃಖದ ಸಮಯದಲ್ಲಿ ದೇಶವು ಒಗ್ಗಟ್ಟಾಗಿದೆ ಮತ್ತು ಭಯೋತ್ಪಾದನೆಯ ವಿರುದ್ಧದ ಭಾರತದ ಸಂಕಲ್ಪ ಅಚಲವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ಯಾವುದೇ ರೀತಿಯ ಭಯೋತ್ಪಾದನೆಗೆ ತಲೆಬಾಗುವುದಿಲ್ಲ ಹಾಗೂ ಭಯೋತ್ಪಾದಕರ ದುರುದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಮಿತ್ ಶಾ ಈ ದಾಳಿಯ ನೋವು ಈಗಲೂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ ಎಂದು ಹೇಳಿದರು. ಭಯೋತ್ಪಾದನೆಯನ್ನು “ಮಾನವೀಯತೆಯ ಅತಿದೊಡ್ಡ ಶತ್ರು” ಎಂದು ಬಣ್ಣಿಸಿದ ಅವರು, ದೇಶವು ಒಗ್ಗಟ್ಟಿನಿಂದ ಅದರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರ ವಿರುದ್ಧ ಭಾರತ ತನ್ನ ಶೂನ್ಯ ಸಹಿಷ್ಣುತೆ ನೀತಿಯನ್ನು ಮುಂದುವರಿಸಲಿದೆ ಎಂದು ಅಮಿತ್ ಶಾ ಹೇಳಿದರು.
2025ರ ಏಪ್ರಿಲ್ 22ರಂದು ಬೆಸರನ್ ಕಣಿವೆ ಯಲ್ಲಿ ನಡೆದ ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಲಷ್ಕರ್-ಎ-ತೊಯ್ಬಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ ಗೆ ಸೇರಿದ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಧರ್ಮದ ಆಧಾರದ ಮೇಲೆ ದಾಳಿ ನಡೆಸಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa