ಚಾರ್ ಧಾಮ್ ಯಾತ್ರೆ ಗೆ ಪ್ರಧಾನಿ ಮೋದಿ ಶುಭಾಶಯ
ಚಾರ್ ಧಾಮ್ ಯಾತ್ರೆ
PM file photo


ನವದೆಹಲಿ, 22 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ದೇವಭೂಮಿಯಲ್ಲಿ ಆರಂಭವಾದ ಚಾರ್ಧಾಮ್ ಯಾತ್ರೆಯ ಅಂಗವಾಗಿ ದೇಶಾದ್ಯಂತದ ಭಕ್ತರಿಗೆ ಶುಭಾಶಯ ಕೋರಿದ್ದಾರೆ. ಶ್ರೀ ಕೇದಾರನಾಥ ಧಾಮ ದ್ವಾರ ಉದ್ಘಾಟನೆಯೊಂದಿಗೆ ಯಾತ್ರೆ ಆರಂಭವಾಗಿದ್ದು, ಭಕ್ತರಿಗೆ ಸುಖದ, ಸುರಕ್ಷಿತ ಮತ್ತು ಶುಭಕರ ಯಾತ್ರೆಯಾಗಲಿ ಎಂದು ಅವರು ಹಾರೈಸಿದ್ದಾರೆ.

ಚಾರ್ಧಾಮ್ ಯಾತ್ರೆಯು ದೇಶದ ನಂಬಿಕೆ, ಆಧ್ಯಾತ್ಮಿಕತೆ ಹಾಗೂ ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಕೇದಾರನಾಥ ಧಾಮ, ಶ್ರೀ ಬದರಿನಾಥ ಧಾಮ, ಗಂಗೋತ್ರಿ ಧಾಮ ಮತ್ತು ಯಮುನೋತ್ರಿ ಧಾಮ ಧಾಮಗಳು ಶತಮಾನಗಳಿಂದ ದೇಶದ ಸನಾತನ ಪರಂಪರೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಭಕ್ತರಿಗೆ ಬರೆದ ವಿಶೇಷ ಪತ್ರದಲ್ಲಿ, ಏಪ್ರಿಲ್ 19ರಂದು ಗಂಗೋತ್ರಿ ಧಾಮ ಮತ್ತು ಯಮುನೋತ್ರಿ ಧಾಮ ದ್ವಾರಗಳು ತೆರೆಯಲ್ಪಟ್ಟಿದ್ದು, ಶ್ರೀ ಕೇದಾರನಾಥ ಧಾಮ ದ್ವಾರಗಳು ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಉದ್ಘಾಟನೆಗೊಂಡಿವೆ ಎಂದು ಉಲ್ಲೇಖಿಸಿದ್ದಾರೆ. ಇದೇ ವೇಳೆ ಏಪ್ರಿಲ್ 23ರಂದು ಶ್ರೀ ಬದರಿನಾಥ ಧಾಮ ದ್ವಾರಗಳೂ ಭಕ್ತರಿಗಾಗಿ ತೆರೆಯಲಿವೆ ಎಂದು ತಿಳಿಸಿದ್ದಾರೆ.

ಹಿಮಾಲಯದ ಮಡಿಲಿನಲ್ಲಿ ನೆಲೆಗೊಂಡಿರುವ ಚಾರ್ಧಾಮ್ ದೇಶದ ಅಚಲ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಆದಿ ಶಂಕರಾಚಾರ್ಯ ಸೇರಿದಂತೆ ಅನೇಕ ಸಂತರ ಪ್ರಯತ್ನಗಳಿಂದ ಈ ತೀರ್ಥಕ್ಷೇತ್ರಗಳು ದೇಶವನ್ನು ಒಂದೇ ಆಧ್ಯಾತ್ಮಿಕ ಬಾಂಧವ್ಯದಲ್ಲಿ ಕಟ್ಟಿ ಹಾಕಿವೆ ಎಂದು ಪ್ರಧಾನಿ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಉತ್ತರಾಖಂಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರವಾಸೋದ್ಯಮ, ಮೂಲಸೌಕರ್ಯ ಹಾಗೂ ಯಾತ್ರಿಕರ ಸೌಲಭ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಚಾರ್ಧಾಮ್ ಯಾತ್ರೆಯನ್ನು ಹೆಚ್ಚು ಸುರಕ್ಷಿತ, ಸುಲಭ ಹಾಗೂ ಅನುಕೂಲಕರವಾಗಿಸಲು ಹಲವು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಕ್ರಮಗಳನ್ನು ಕೈಗೊಂಡಿವೆ ಎಂದು ಅವರು ಹೇಳಿದ್ದಾರೆ.

ಯಾತ್ರೆಯ ಸಂದರ್ಭದಲ್ಲಿ “ಡಿಜಿಟಲ್ ಉಪವಾಸ” ಆಚರಿಸುವಂತೆ ಭಕ್ತರಿಗೆ ಮನವಿ ಮಾಡಿದ ಪ್ರಧಾನಿ, ಪ್ರಕೃತಿ ಮತ್ತು ಆಧ್ಯಾತ್ಮಿಕತೆಯೊಂದಿಗೆ ಆಳವಾದ ಸಂಪರ್ಕ ಸಾಧಿಸುವ ಮೂಲಕ ಯಾತ್ರೆಯ ಅನುಭವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಭಕ್ತರು ಯಾತ್ರೆಯ ವೇಳೆ ಐದು ಸಂಕಲ್ಪಗಳನ್ನು ಪಾಲಿಸಬೇಕು ಎಂದು ಕರೆ ನೀಡಿರುವ ಪ್ರಧಾನಿ, ಸ್ವಚ್ಛತೆ ಕಾಪಾಡುವುದು, ಪರಿಸರ ಸಂರಕ್ಷಣೆ, ಸೇವಾ ಮನೋಭಾವ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ಹಾಗೂ ನಿಯಮ-ಶಿಸ್ತಿನ ಪಾಲನೆಗೆ ಒತ್ತು ನೀಡಿದ್ದಾರೆ. ಏಕಬಳಕೆ ಪ್ಲಾಸ್ಟಿಕ್ ಬಳಕೆ ತಪ್ಪಿಸಿ, ನದಿಗಳನ್ನು ಸ್ವಚ್ಛವಾಗಿಡಿ ಹಾಗೂ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಗೌರವ ತೋರಬೇಕು ಎಂದು ಮನವಿ ಮಾಡಿದ್ದಾರೆ.

ಸ್ಥಳೀಯ ಜನರೊಂದಿಗೆ ಬೆರೆತು ಅವರ ಜೀವನಶೈಲಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿತುಕೊಳ್ಳುವ ಪ್ರಯತ್ನ ಮಾಡುವಂತೆ ಕರೆ ನೀಡಿರುವ ಪ್ರಧಾನಿ, ಈ ಸಂಕಲ್ಪಗಳೊಂದಿಗೆ ಕೈಗೊಳ್ಳುವ ಚಾರ್ಧಾಮ್ ಯಾತ್ರೆಯು ಭಕ್ತರಿಗೆ ಆಧ್ಯಾತ್ಮಿಕ ಸಮೃದ್ಧಿಯ ಅನುಭವ ನೀಡುವುದರ ಜೊತೆಗೆ ದೇಶದ ಸಾಂಸ್ಕೃತಿಕ ಏಕತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande