
ನವದೆಹಲಿ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ದೇಶದ ರಕ್ಷಣಾ ರಫ್ತು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಈ ಅವಧಿಯಲ್ಲಿ ಭಾರತದ ರಕ್ಷಣಾ ರಫ್ತು ₹38,424 ಕೋಟಿಗಳಿಗೆ ಏರಿಕೆಯಾಗಿ, ಹಿಂದಿನ ಹಣಕಾಸು ವರ್ಷದೊಂದಿಗೆ ಹೋಲಿಸಿದರೆ ಶೇ.62.66ರಷ್ಟು ಗಣನೀಯ ಬೆಳವಣಿಗೆಯನ್ನು ದಾಖಲಿಸಿದೆ. ರಫ್ತುಗಳಲ್ಲಿ ₹14,802 ಕೋಟಿಗಳ ಹೆಚ್ಚಳ ಕಂಡು ಬಂದಿರುವುದು ದೇಶದ ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳ ಮೇಲೆ ಜಾಗತಿಕ ಮಟ್ಟದಲ್ಲಿ ವಿಶ್ವಾಸ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದಿದ್ದಾರೆ.
ಈ ಸಾಧನೆಯಲ್ಲಿ ಸರ್ಕಾರಿ ರಕ್ಷಣಾ ಸಂಸ್ಥೆಗಳಾದ DPSUಗಳು ಶೇ.54.84ರಷ್ಟು ಪಾಲು ಹೊಂದಿದ್ದರೆ, ಖಾಸಗಿ ವಲಯದ ಕೊಡುಗೆ ಶೇ.45.16ರಷ್ಟಿದೆ. ಇದರಿಂದ ಸಹಯೋಗದ ಆಧಾರದ ಮೇಲೆ ನಿರ್ಮಾಣವಾಗುತ್ತಿರುವ ಸ್ವಾವಲಂಬಿ ರಕ್ಷಣಾ ವ್ಯವಸ್ಥೆಯ ಶಕ್ತಿ ಸ್ಪಷ್ಟವಾಗುತ್ತದೆ.
ಭಾರತವು ‘ಆತ್ಮನಿರ್ಭರ್ ಭಾರತ’ ದ ದೃಷ್ಟಿಯಿಂದ ರಕ್ಷಣಾ ಉತ್ಪಾದನೆ ಹಾಗೂ ರಫ್ತು ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿದ್ದು, ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ ಎಂದು ರಾಜನಾಥ ಸಿಂಗ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa