ಚಾರಣಿಗರ ಸುರಕ್ಷತೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಚಾರಣ ಪಥಗಳಲ್ಲಿ ಚಾರಣಿಗರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶುಕ್ರವಾರ ಈ ಹೊಸ
Release


ಬೆಂಗಳೂರು, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಚಾರಣ ಪಥಗಳಲ್ಲಿ ಚಾರಣಿಗರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಜಾರಿಗೆ ತಂದಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶುಕ್ರವಾರ ಈ ಹೊಸ ಎಸ್ಒಪಿಯನ್ನು ಬಿಡುಗಡೆ ಮಾಡಿದ್ದು, ಇತ್ತೀಚೆಗೆ ಸಂಭವಿಸಿರುವ ಕೆಲವು ದುರ್ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಹೊಸ ನಿಯಮಾವಳಿಯ ಪ್ರಕಾರ, ಇನ್ನು ಮುಂದೆ ಯಾವುದೇ ಚಾರಣಿಗರು ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ತೆರಳುವಂತಿಲ್ಲ. ಪ್ರತಿ 10 ಚಾರಣಿಗರಿಗೆ ಒಬ್ಬ ನೇಚರ್ ಗೈಡ್ ಕಡ್ಡಾಯವಾಗಿದ್ದು, ಒಂದು ಬ್ಯಾಚ್ನಲ್ಲಿ ಗರಿಷ್ಠ 150 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಚಾರಣಕ್ಕೆ ಬರುವವರು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬ ಚಾರಣಿಗರ ಮೊಬೈಲ್ಗೆ ಟ್ರ್ಯಾಕಿಂಗ್ ಆಪ್ ಅಳವಡಿಸಲಾಗುತ್ತದೆ. ಜೊತೆಗೆ, ನೇಚರ್ ಗೈಡ್ಗಳಿಗೆ ಜಿಪಿಎಸ್ ಹೊಂದಿದ ವಾಕಿ-ಟಾಕಿ ನೀಡಲಾಗುತ್ತದೆ. ಚಾರಣದ ವೇಳೆ ಯಾರಾದರೂ ದಾರಿ ತಪ್ಪಿದರೆ ತಕ್ಷಣ ಪತ್ತೆಹಚ್ಚಲು ಈ ವ್ಯವಸ್ಥೆ ನೆರವಾಗಲಿದೆ.

ಚಾರಣ ಆರಂಭಕ್ಕೂ ಮುನ್ನ ಬೇಸ್ ಕ್ಯಾಂಪ್ನಲ್ಲಿ ಸುರಕ್ಷತಾ ಮಾರ್ಗಸೂಚಿಗಳು, ಚಾರಣದ ಪೂರ್ವಭಾವಿ ಮಾಹಿತಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಾರಣಿಗರಿಗೆ ವಿವರ ನೀಡಲಾಗುತ್ತದೆ.

ಅರಣ್ಯ ಪ್ರದೇಶಗಳಲ್ಲಿ ಶಬ್ದಕಾರಿ ಸಾಧನಗಳು, ಆಯುಧಗಳು, ಕ್ಯಾಂಪ್ ಫೈರ್ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಚಾರಣದ ಅವಧಿಯಲ್ಲಿ ನೇಚರ್ ಗೈಡ್ಗಳು ಚಾರಣಿಗರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಬೇಕಿದ್ದು, ಪ್ರತಿ ಅರ್ಧ ಗಂಟೆಗೆ ಬೇಸ್ ಕ್ಯಾಂಪ್ ಜೊತೆ ಸಂಪರ್ಕದಲ್ಲಿರಬೇಕು. ಅಲ್ಲದೆ, ನಿಯಮಿತವಾಗಿ ಚಾರಣಿಗರ ಸಂಖ್ಯೆಯನ್ನು ಪರಿಶೀಲಿಸಬೇಕು.

ಅಪ್ರಾಪ್ತ ವಯಸ್ಕರು ಚಾರಣಕ್ಕೆ ತೆರಳಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಹಿರಿಯ ನಾಗರಿಕರು ದೈಹಿಕ ಸಾಮರ್ಥ್ಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಜೊತೆಗೆ, ಪ್ರಥಮ ಚಿಕಿತ್ಸಾ ಕಿಟ್ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಅರಣ್ಯ ವಿಹಾರ ತಾಣಗಳಲ್ಲಿರುವ ಎಲ್ಲಾ ಚಾರಣ ಪಥಗಳನ್ನು ಶೀಘ್ರದಲ್ಲೇ aranyavihaara.karnataka.gov.in ಪೋರ್ಟಲ್ನಲ್ಲಿ ಸೇರಿಸಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಚಾರಣಿಗರ ಸುರಕ್ಷತೆ, ಪ್ರಕೃತಿ ಸಂರಕ್ಷಣೆ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಚಿವ ಈಶ್ವರ ಖಂಡ್ರೆ ಅಭಿನಂದಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande