ಆಟೋ-ಟ್ಯಾಕ್ಸಿ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಿ : ಎ.ಎನ್. ನಟರಾಜ್ ಗೌಡ
ಬೆಂಗಳೂರು, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಆಟೋ-ರಿಕ್ಷಾ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸುವಂತೆ ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷರು ಹಾಗೂ ಮುಖ್ಯ ವಕ್ತಾರರಾದ ಎ.ಎನ್. ನಟರಾಜ್ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್
ಆಟೋ-ಟ್ಯಾಕ್ಸಿ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಿ : ಎ.ಎನ್. ನಟರಾಜ್ ಗೌಡ


ಬೆಂಗಳೂರು, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಆಟೋ-ರಿಕ್ಷಾ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರಿಗೆ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸುವಂತೆ ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷರು ಹಾಗೂ ಮುಖ್ಯ ವಕ್ತಾರರಾದ ಎ.ಎನ್. ನಟರಾಜ್ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಮೇ 1, 2026ರಿಂದ ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡಲು ಬರುವುದನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಉಲ್ಲೇಖಿಸಿರುವ ಅವರು, ಅದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊರರಾಜ್ಯದ ಆಟೋ ಮತ್ತು ಕ್ಯಾಬ್ ಚಾಲಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕನ್ನಡಿಗರು ತಮ್ಮದೇ ನಾಡಿನಲ್ಲಿ ಭಾಷಾ ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಚಾಲಕರಿಗೆ ಕನ್ನಡ ಬಾರದಿರುವುದರಿಂದ ಪ್ರಯಾಣಿಕರು ಸಂವಹನದಲ್ಲಿ ತೊಂದರೆ ಅನುಭವಿಸುತ್ತಿದ್ದು, ಅನೇಕ ಕಡೆಗಳಲ್ಲಿ ಭಾಷಾ ವಿಚಾರವಾಗಿ ವಾಗ್ವಾದಗಳು, ಕಿರುಕುಳ ಹಾಗೂ ಅಸಮಾಧಾನದ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳ ಮೂಲಕ ಚಾಲಕರಿಗೆ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುತ್ತಿದ್ದು, ನಾಮಫಲಕಗಳನ್ನು ಓದುವುದು, ಸರಳ ವಾಕ್ಯಗಳನ್ನು ಬರೆಯುವುದು ಮತ್ತು ಸಾಮಾನ್ಯ ಸಂಭಾಷಣೆ ನಡೆಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲಿಯೂ ಅನುಸರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮನವಿಯಲ್ಲಿ ಅವರು ಸರ್ಕಾರದ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.

ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲನಾ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಕನ್ನಡದಲ್ಲಿ ಓದಲು, ಬರೆಯಲು ಹಾಗೂ ಮಾತನಾಡಲು ಬರುವುದನ್ನು ಕಡ್ಡಾಯಗೊಳಿಸಬೇಕು.

ಪ್ರಾದೇಶಿಕ ಸಾರಿಗೆ ಕಚೇರಿ ಮಟ್ಟದಲ್ಲಿ ಕನ್ನಡ ನಾಮಫಲಕಗಳನ್ನು ಓದುವ ಹಾಗೂ ಕನಿಷ್ಠ ಮಟ್ಟದ ಸಂಭಾಷಣೆ ನಡೆಸುವ ಸಾಮರ್ಥ್ಯವನ್ನು ಪರೀಕ್ಷಿಸಬೇಕು.

ಕನ್ನಡ ಕಲಿಯಲು ನಿರಾಕರಿಸುವ ಅಥವಾ ಭಾಷಾ ನಿಯಮ ಪಾಲಿಸದ ಚಾಲಕರ ಪರವಾನಗಿಯನ್ನು ಅಮಾನತು ಅಥವಾ ರದ್ದುಪಡಿಸುವ ನಿಯಮ ರೂಪಿಸಬೇಕು.

ಭಾಷಾ ನಿಯಮಗಳನ್ನು ಉಲ್ಲಂಘಿಸಿ, ಭ್ರಷ್ಟಾಚಾರದ ಮೂಲಕ ಪರವಾನಗಿ ನೀಡುವ ಸಾರಿಗೆ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು.

ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬರೂ ಈ ನಾಡಿನ ನೆಲ, ಜಲ ಹಾಗೂ ಭಾಷೆಯನ್ನು ಗೌರವಿಸುವುದು ಮತ್ತು ಕಲಿಯುವುದು ಅವರ ಕರ್ತವ್ಯ ಎಂದು ಮನವಿಯಲ್ಲಿ ಎ.ಎನ್. ನಟರಾಜ್ ಗೌಡ ಹೇಳಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಾರಿಗೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande