ಇಸ್ರೇಲ್-ಹಿಜ್ಬುಲ್ಲಾ ನಡುವೆ 10 ದಿನಗಳ ಕದನ ವಿರಾಮ
ವಿದ್ಯಮಾನ
ಇಸ್ರೇಲ್-ಹಿಜ್ಬುಲ್ಲಾ ನಡುವೆ 10 ದಿನಗಳ ಕದನ ವಿರಾಮ


ವಾಷಿಂಗ್ಟನ್, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ತೀವ್ರಗೊಳಿಸಿದ್ದ ಇಸ್ರೇಲ್ ಹಾಗೂ ಇರಾನ್ ಪರವಾದ ಲೆಬನಾನಿನ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬೀಳುವ ಸಾಧ್ಯತೆ ಮೂಡಿದೆ. ಉಭಯಪಕ್ಷಗಳು 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಪೂರ್ವ ಕಾಲಮಾನದ ಸಂಜೆ 5 ಗಂಟೆಯಿಂದ, ಅಂದರೆ ಭಾರತೀಯ ಕಾಲಮಾನದ ಮಧ್ಯಾಹ್ನ 2.30ರಿಂದ, ದಾಳಿಗಳನ್ನು ನಿಲ್ಲಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಈ ಕದನ ವಿರಾಮವನ್ನು ದೀರ್ಘಕಾಲಿಕ ಶಾಂತಿ ಪ್ರಕ್ರಿಯೆಯ ಆರಂಭವೆಂದು ಪರಿಗಣಿಸಿರುವ ಟ್ರಂಪ್, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಜಂಟಿ ಮುಖ್ಯಸ್ಥರ ಸಮಿತಿಯ ಮುಖ್ಯಸ್ಥ ಜನರಲ್ ಡಾನ್ ಕೇನ್ ಅವರಿಗೆ ಶಾಂತಿ ಮಾತುಕತೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಜೊತೆಗೆ, ಮಾತುಕತೆಗಾಗಿ ನೆತನ್ಯಾಹು ಮತ್ತು ಔನ್ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ.

ಲೆಬನಾನ್ನಲ್ಲಿನ ಸಂಘರ್ಷ ವಾಸ್ತವವಾಗಿ ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ನಡುವೆ ನಡೆಯುತ್ತಿದೆ. ಲೆಬನಾನಿನಲ್ಲಿರುವ ಈ ಸಂಘಟನೆಯನ್ನು ಇಸ್ರೇಲ್ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸುತ್ತವೆ.

ಟ್ರಂಪ್ ಅವರ ಮಧ್ಯಸ್ಥಿಕೆ ಪ್ರಯತ್ನಗಳನ್ನು ಲೆಬನಾನ್ ಅಧ್ಯಕ್ಷ ಔನ್ ಸ್ವಾಗತಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಪ್ರಕ್ರಿಯೆ ಆರಂಭಿಸಲು ಅಮೆರಿಕದ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದ್ದಾರೆ. ಲೆಬನಾನಿನ ಅಧ್ಯಕ್ಷೀಯ ಕಚೇರಿಯ ಹೇಳಿಕೆಯಲ್ಲಿ, ಟ್ರಂಪ್ ಲೆಬನಾನ್ಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಲಾಗಿದೆ.

ಇನ್ನೊಂದೆಡೆ, ಪ್ರಧಾನಿ ನೆತನ್ಯಾಹು ಅವರು ಭದ್ರತಾ ಸಚಿವ ಸಂಪುಟಕ್ಕೆ, ಟ್ರಂಪ್ ಅವರ ಮನವಿಯ ಮೇರೆಗೆ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ, ಯುದ್ಧವಿರಾಮದ ಅವಧಿಯಲ್ಲಿ ದಕ್ಷಿಣ ಲೆಬನಾನ್ನ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾದ ಇಸ್ರೇಲಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲಿನ ಪ್ರತಿಪಕ್ಷದ ನಾಯಕ ಯೈರ್ ಲ್ಯಾಪಿಡ್ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ನೆತನ್ಯಾಹು ಸರ್ಕಾರ ತನ್ನ ಹಳೆಯ ನಿಲುವಿನಿಂದ ಹಿಂದೆ ಸರಿದಿದೆ ಎಂದು ಅವರು ಆರೋಪಿಸಿದ್ದಾರೆ.

ಹಿಜ್ಬುಲ್ಲಾ ಪರ ಶಾಸಕ ಇಬ್ರಾಹಿಂ ಅಲ್-ಮೌಸಾವಿ ಕೂಡ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ ದಾಳಿಗಳನ್ನು ನಿಲ್ಲಿಸಿದರೆ ಟ್ರಂಪ್ ಘೋಷಣೆಯನ್ನು ಪಾಲಿಸಲು ತಮ್ಮ ಸಂಘಟನೆ ಸಿದ್ಧವಿದೆ ಎಂದು ಹೇಳಿದ್ದಾರೆ. ಲೆಬನಾನ್ ಮೇಲೆ ಒತ್ತಡ ಹೇರಿದ್ದಕ್ಕಾಗಿ ಇರಾನ್ಗೆ ಧನ್ಯವಾದ ಸಲ್ಲಿಸಿದ ಅವರು, ಇರಾನ್ ಬೆಂಬಲವಿಲ್ಲದೆ ಈ ಕದನ ವಿರಾಮ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಲೆಬನಾನ್ ಪ್ರಧಾನಿ ನವಾಫ್ ಸಲಾಂ ಕದನ ವಿರಾಮವನ್ನು ಸ್ವಾಗತಿಸಿದ್ದು, ಇದು ಲೆಬನಾನ್ ಜನರ ಗೆಲುವಾಗಿದೆ ಎಂದು ಹೇಳಿದ್ದಾರೆ. ಹೋರಾಟವನ್ನು ಕೊನೆಗೊಳಿಸಲು ನೆರವಾದ ಜಾಗತಿಕ ನಾಯಕರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ನಡುವೆ, ಲೆಬನಾನ್ ಸೇನೆಯ ವಕ್ತಾರ ಚಾರ್ಲ್ಸ್ ಜಬ್ಬೂರ್, ಹೆಜ್ಬೊಲ್ಲಾವನ್ನು ನಿಶ್ಶಸ್ತ್ರಗೊಳಿಸಲು ಈ 10 ದಿನಗಳ ಅವಕಾಶವನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಫ್ರಾನ್ಸ್ನ ಅಧ್ಯಕ್ಷೀಯ ನಿವಾಸವಾದ ಎಲಿಸೀ ಪ್ಲೇಸ ಈ ವಿದ್ಯಮಾನವನ್ನು “ಅತ್ಯಂತ ಒಳ್ಳೆಯ ಸುದ್ದಿ” ಎಂದು ಬಣ್ಣಿಸಿದೆ. ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ವಾರಗಳಿಂದ ಉದ್ವಿಗ್ನತೆ ಹೆಚ್ಚಾಗಿದ್ದ ಹಿನ್ನೆಲೆ, ಈ 10 ದಿನಗಳ ಕದನ ವಿರಾಮವು ಶಾಶ್ವತ ಶಾಂತಿಯತ್ತ ಮಹತ್ವದ ಹೆಜ್ಜೆಯಾಗಿ ಪರಿಣಮಿಸಬಹುದೇ ಎಂಬುದರತ್ತ ಜಗತ್ತಿನ ಗಮನ ಕೇಂದ್ರೀಕೃತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande