
ಬೆಂಗಳೂರು, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟದ ತೀವ್ರ ಕುಸಿತದ ಮುನ್ಸೂಚನೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಸರ್ಕಾರ ಜನರ ಸಂಕಷ್ಟದತ್ತ ಗಮನ ಹರಿಸುವ ಬದಲು ರಾಜಕೀಯ ಕುರ್ಚಿ ಕಿತ್ತಾಟದಲ್ಲಿ ತೊಡಗಿಕೊಂಡಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಆಡಳಿತವನ್ನು ಕಡೆಗಣಿಸಿ ದೆಹಲಿ ಪ್ರವಾಸ ಮತ್ತು ಅಧಿಕಾರ ಉಳಿಸಿಕೊಳ್ಳುವ ರಾಜಕೀಯದಲ್ಲಿ ನಿರತರಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಟೀಕಿಸಿದರು.
ಮುಂಗಾರು ಕೊರತೆಯ ದುಷ್ಪರಿಣಾಮಗಳು ರೈತರು ಮತ್ತು ಸಾರ್ವಜನಿಕರ ಮೇಲೆ ಬೀಳುವ ಮುನ್ನವೇ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಪಾರದರ್ಶಕವಾಗಿರಬೇಕು ಎಂದರು. ಮಳೆಯ ಅನಿಶ್ಚಿತತೆಯನ್ನು ದುರುಪಯೋಗಪಡಿಸಿಕೊಂಡು ಕಾಳಸಂತೆಕೋರರು ರೈತರನ್ನು ಲೂಟಿ ಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಮೇವು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಮೇವು ಬ್ಯಾಂಕ್ಗಳನ್ನು ತಕ್ಷಣ ಸಕ್ರಿಯಗೊಳಿಸಬೇಕು. ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಬರದಂತೆ ಸರ್ಕಾರ ಮುಂಚಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಭತ್ತ, ಜೋಳ ಹಾಗೂ ದ್ವಿದಳ ಧಾನ್ಯಗಳ ಇಳುವರಿ ಕುಂಠಿತಗೊಳ್ಳುವ ಭೀತಿ ವ್ಯಕ್ತಪಡಿಸಿದ ಅವರು, ಇದು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ರೈತರ ಆದಾಯ ರಕ್ಷಿಸಲು ಸರ್ಕಾರ ಬೆಳೆ ವಿಮೆ ಹಾಗೂ ಬರ ಪರಿಹಾರಕ್ಕೆ ಸಂಬಂಧಿಸಿದ ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಕುಡಿಯುವ ನೀರಿನ ಬಿಕ್ಕಟ್ಟು ಹಾಗೂ ಅಂತರ್ಜಲ ಮಟ್ಟದ ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ ಅಶೋಕ, ರಾಜ್ಯದ 12 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ ಇರುವ ಹಿನ್ನೆಲೆಯಲ್ಲಿ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಬರುವ ಮುನ್ನವೇ ಪರ್ಯಾಯ ನೀರಿನ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.
ದೆಹಲಿಯ ರಾಜಕೀಯ ಮೇಲಾಟಕ್ಕಿಂತ ರಾಜ್ಯದ ಜನರ ಹಿತವೇ ಮುಖ್ಯಮಂತ್ರಿಗಳ ಮೊದಲ ಆದ್ಯತೆಯಾಗಬೇಕು. ಸರ್ಕಾರ ಕೂಡಲೇ ಬರ ನಿರ್ವಹಣಾ ಸಮಿತಿಯನ್ನು ಸಕ್ರಿಯಗೊಳಿಸಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಂಟಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅಶೋಕ ಎಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa