
ವಾಷಿಂಗ್ಟನ್, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕ ಇಂದು ತನ್ನ ಮುಂದಿನ ಯುದ್ಧತಂತ್ರ ಮತ್ತು ರಾಜತಾಂತ್ರಿಕ ಉದ್ದೇಶಗಳನ್ನು ಜಗತ್ತಿಗೆ ಬಹಿರಂಗಪಡಿಸುವ ನಿರೀಕ್ಷೆಯಿದೆ.
ಪೆಂಟಗನ್ ನಲ್ಲಿ ಇಂದು ಸಂಜೆ ನಡೆಯಲಿರುವ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡಾನ್ ಕೇನ್ ಭಾಗವಹಿಸಲಿದ್ದು, ಇರಾನ್ ಯುದ್ಧದ ಮುಂದಿನ ಹಂತಗಳ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.
ಅಮೆರಿಕ ರಕ್ಷಣಾ ಇಲಾಖೆಯ ಪ್ರಕಟಣೆಯ ಪ್ರಕಾರ, ಈ ಪತ್ರಿಕಾಗೋಷ್ಠಿ ಪೂರ್ವ ಅಮೆರಿಕ ಸಮಯ ಬೆಳಿಗ್ಗೆ 8 ಗಂಟೆಗೆ, ಭಾರತೀಯ ಸಮಯದ ಪ್ರಕಾರ ಸಂಜೆ 5.30ಕ್ಕೆ ಆರಂಭವಾಗುವ ನಿರೀಕ್ಷೆಯಿದೆ. ಇರಾನ್ನೊಂದಿಗೆ ಎರಡು ವಾರಗಳ ಕದನ ವಿರಾಮ ಮುಂದುವರಿದಿರುವ ನಡುವೆಯೇ ಈ ಸಭೆ ನಡೆಯುತ್ತಿರುವುದು ವಿಶೇಷ ಗಮನ ಸೆಳೆದಿದೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅಮೆರಿಕ ಇರಾನ್ನ ಸಮುದ್ರ ಮಾರ್ಗಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮತ್ತು ಪ್ರಮುಖ ಬಂದರುಗಳ ಮೇಲೆ ಕಣ್ಗಾವಲು ಮುಂದುವರಿದಿದೆ. ಅಮೆರಿಕದ ನಿರ್ಬಂಧಗಳು ಮುಂದುವರಿದರೆ ಮಧ್ಯಪ್ರಾಚ್ಯದ ಮತ್ತೊಂದು ಪ್ರಮುಖ ಸಮುದ್ರ ಮಾರ್ಗವನ್ನು ಬಂದ್ ಮಾಡುವುದಾಗಿ ಇರಾನ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಇದೇ ವೇಳೆ, ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಸಕ್ರಿಯವಾಗಿ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ ಮುನಿರ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಟೆಹ್ರಾನ್ಗೆ ತೆರಳಿ ಇರಾನ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಹೊಸ ಸುತ್ತಿನ ಮಾತುಕತೆಗಳನ್ನು ಇಸ್ಲಾಮಾಬಾದನಲ್ಲಿ ಆಯೋಜಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಂಘರ್ಷ ಶೀಘ್ರದಲ್ಲೇ ಅಂತ್ಯಗೊಳ್ಳುವ ಸಾಧ್ಯತೆಯ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. “ಸಂಘರ್ಷ ಕೊನೆಗೊಳ್ಳಲು ಬಹಳ ಹತ್ತಿರದಲ್ಲಿದೆ” ಎಂದು ಅವರು ಹೇಳಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ನೇರ ಮಾತುಕತೆಗಳು ಪುನರಾರಂಭವಾಗಬಹುದು ಎಂದು ಸೂಚಿಸಿದ್ದಾರೆ.
ಈ ಮಧ್ಯೆ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರಿಫ್ ಅವರು ಸೌದಿ ಅರೇಬಿಯಾಗೆ ಭೇಟಿ ನೀಡಿ, ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ತಗ್ಗಿಸಲು ಪಾಕಿಸ್ತಾನ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಷರೀಫ್ ಯುವರಾಜರಿಗೆ ವಿವರಿಸಿದರು. ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಕೂಡ ಭಾಗವಹಿಸಿದ್ದರು.
ಇರಾನ್ ನಾಯಕರೊಂದಿಗೆ ನೇರ ಮಾತುಕತೆ ನಡೆಸಲು ಪಾಕಿಸ್ತಾನ ಸರ್ಕಾರ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರನ್ನು ಟೆಹ್ರಾನ ಗೆ ಕಳುಹಿಸಿರುವುದಾಗಿ ಪಾಕಿಸ್ತಾನದ ಪ್ರಧಾನಿ ಕಚೇರಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa