
ಬೆಂಗಳೂರು, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಿಬಿಎ ವ್ಯಾಪ್ತಿಯ ಪಾಲಿಕೆ ಶಾಲಾ ಶಿಕ್ಷಕರಿಗೆ ಮೂರು ತಿಂಗಳಿನಿಂದ ವೇತನ ಬಾಕಿ ಉಳಿದಿರುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಟೀಕೆ ವ್ಯಕ್ತಪಡಿಸಿ ದ್ದಾರೆ.
ಈ ಕುರಿತು ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅಶೋಕ್, “ಸುರಂಗ ರಸ್ತೆ, ಸ್ಕೈ ಡೆಕ್, ‘ಬ್ರ್ಯಾಂಡ್ ಬೆಂಗಳೂರು’ ಎಂಬ ಘೋಷಣೆಗಳ ಮೂಲಕ ಜನರಿಗೆ ಭರವಸೆ ನೀಡಿದರೂ, ವಾಸ್ತವದಲ್ಲಿ ಕನ್ನಡಿಗರಿಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದ್ದಾರೆ.
“ಜಿಬಿಎ ಅವ್ಯವಸ್ಥೆಯಿಂದ ಶೈಕ್ಷಣಿಕ ವರ್ಷ ಮುಗಿದರೂ ಪಾಲಿಕೆ ಶಿಕ್ಷಕರಿಗೆ ಮೂರು ತಿಂಗಳಿನಿಂದ ಸಂಬಳ ಸಿಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಹೇಳಿದ್ದಾರೆ.
ಮೊದಲು ಶಿಕ್ಷಕರ ಬಾಕಿ ವೇತನವನ್ನು ಬಿಡುಗಡೆ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅಶೋಕ್, ಆಡಳಿತದಲ್ಲಿ ಗೊಂದಲ ಮತ್ತು ನಿರ್ಲಕ್ಷ್ಯ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa