
ಬೆಂಗಳೂರು, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಇನ್ನಷ್ಟು ಸಂಶೋಧನೆ ಮತ್ತು ಪ್ರಯೋಗಗಳು ನಡೆಯಬೇಕಿದ್ದು, ಅದರ ಮೂಲಕ ಜನರಲ್ಲಿ ನಂಬಿಕೆ ಹೆಚ್ಚಿಸುವುದು ಅಗತ್ಯವೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ನಗರದ ಐಐಎಸ್ಸಿಯ ಎ.ವಿ. ರವಣ ರಾವ್ ಸಭಾಂಗಣದಲ್ಲಿ ಕರ್ನಾಟಕ ಹೋಮಿಯೋಪಥಿಕ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೋಮಿಯೋಪತಿಗೆ ಸುಮಾರು 200 ವರ್ಷಗಳ ಇತಿಹಾಸವಿದ್ದು, ಇದು ವೈಜ್ಞಾನಿಕ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾಗಿದೆ. ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನವಾಗಿರುವ ಹೋಮಿಯೋಪತಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಸರ್ಕಾರದ ವತಿಯಿಂದ ಸುಮಾರು 60-70 ಹೋಮಿಯೋಪತಿ ಡಿಸ್ಪೆನ್ಸರಿಗಳು ಕಾರ್ಯನಿರ್ವಹಿಸುತ್ತಿವೆ. ಬೋರ್ಡ್ ಚುನಾವಣೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಂಘದ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದು, ಸರ್ಕಾರ ಮುಕ್ತ ಸಂವಾದಕ್ಕೆ ಸಿದ್ಧವಿದೆ ಎಂದು ಅವರು ಹೇಳಿದರು.
ಇನ್ನು ಕೆಲವೇ ದಿನಗಳಲ್ಲಿ ಹೋಮಿಯೋಪತಿ ಮೆಡಿಕಲ್ ಕಾಲೇಜು ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಸಚಿವರು ನೀಡಿದರು. ಹೋಮಿಯೋಪತಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ವಿಸ್ತರಿಸುವ ಅಗತ್ಯವಿದ್ದು, ವೈದ್ಯರು ಮತ್ತು ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಯೋಜಿತ ಪ್ರಯತ್ನ ಮಾಡಬೇಕು ಎಂದರು.
ಜನರಲ್ಲಿ ಹೋಮಿಯೋಪತಿ ಕುರಿತು ವಿಶ್ವಾಸ ಮೂಡಿಸುವುದು ಅತ್ಯಂತ ಮುಖ್ಯ. ಅದು ಸಾಧಿಸಿದಾಗ ಮಾತ್ರ ಸರ್ಕಾರದಿಂದ ಇನ್ನಷ್ಟು ಯೋಜನೆಗಳು ಮತ್ತು ಸಹಾಯ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಲಕ್ಷ್ಮೀಕಾಂತ ನಂದಾ, ಆಯುಷ್ ಆಯುಕ್ತ ಡಾ. ಸುನಿಲ್ ಪನ್ವರ್, ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa