
ಗದಗ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ರೋಣ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರು ತಮಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಹೈಕಮಾಂಡ್ಗೆ ಆಗ್ರಹಿಸಿದ್ದಾರೆ.
ರೋಣ ಪಟ್ಟಣದಲ್ಲಿ ಮಾಧ್ಯಮಗೊಂದಿಗೆ ಮಾತನಾಡಿದ ಅವರು, ತಾವು ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಇದುವರೆಗೆ 8 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 4 ಬಾರಿ ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಅನುಭವ ಮತ್ತು ಹಿರಿಯತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತ ಎಂದು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಇಂದು ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವುದಾಗಿ ತಿಳಿಸಿದ ಅವರು, ತಮ್ಮ ಜೊತೆಗೆ ಇನ್ನೂ ಹಲವಾರು ಹಿರಿಯ ಶಾಸಕರು ಕೂಡ ತೆರಳಲಿದ್ದಾರೆ ಎಂದು ಹೇಳಿದರು. ಸುಮಾರು 25 ರಿಂದ 35 ಮಂದಿ ಹಿರಿಯ ಶಾಸಕರು ಈ ಬಾರಿ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಪಕ್ಷದಲ್ಲಿ ಈ ಹಿಂದೆ ನಡೆದ ಮಾತುಕತೆಯಂತೆ ಎರಡೂವರೆ ವರ್ಷಗಳ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಬೇಕೆಂದು ನಿರ್ಧಾರವಾಗಿತ್ತು. ಈಗ ಎರಡೂವರೆ ವರ್ಷಗಳು ಪೂರ್ಣಗೊಂಡು ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಹಿರಿಯ ಶಾಸಕರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರಸ್ತುತ ಸಚಿವರಾಗಿರುವ ಹಿರಿಯರಿಗೆ ಪಕ್ಷದ ಸಂಘಟನೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ನೀಡಬೇಕು. ಹಾಗೆಯೇ ಮೂರು ಮತ್ತು ನಾಲ್ಕು ಬಾರಿ ಆಯ್ಕೆಯಾಗಿರುವ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಾವು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ಆದೇಶಗಳನ್ನು ಸದಾ ಗೌರವಿಸುತ್ತೇನೆ. ಆದರೆ ಪಕ್ಷದ ಒಳಗಣ ಪ್ರಕ್ರಿಯೆಗಳಲ್ಲಿ ಹಿರಿಯತೆ ಮತ್ತು ಅನುಭವಕ್ಕೆ ಮೌಲ್ಯ ನೀಡಬೇಕು ಎಂಬುದು ತಮ್ಮ ಮನವಿ ಎಂದು ಸ್ಪಷ್ಟಪಡಿಸಿದರು.
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಅಧಿಕೃತವಾಗಿ ಮಂಡಿಸಲಿದ್ದೇನೆ ಎಂದು ತಿಳಿಸಿದರು.
ಒಟ್ಟಿನಲ್ಲಿ, ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ಮತ್ತೆ ಚುರುಕುಗೊಂಡಿದ್ದು, ಹಿರಿಯ ಶಾಸಕರ ಒತ್ತಾಯ ಹೈಕಮಾಂಡ್ ಯಾವ ರೀತಿಯಲ್ಲಿ ಪರಿಗಣಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / lalita MP