
ಗದಗ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದ ವಿವಿಧ ಕ್ಷೇತ್ರಗಳಿಗೆ ತಟ್ಟುತ್ತಿದ್ದು, ಅದರ ಬಿಸಿ ಇದೀಗ ಗದಗ ಜಿಲ್ಲೆಯ ಆಟೋ ಚಾಲಕರ ಬದುಕಿನ ಮೇಲೂ ತೀವ್ರವಾಗಿ ಬೀಳುತ್ತಿದೆ. ಎಲ್ ಪಿ ಜಿ ಗ್ಯಾಸ್ ದರ ಏರಿಕೆ ಹಾಗೂ ಕೊರತೆ ಹಿನ್ನೆಲೆಯಲ್ಲಿ, ದಿನನಿತ್ಯದ ಆದಾಯಕ್ಕೆ ಅವಲಂಬಿತರಾಗಿದ್ದ ಅನೇಕ ಆಟೋ ಚಾಲಕರು ತಮ್ಮ ವೃತ್ತಿಯನ್ನು ಬಿಟ್ಟು ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಈ ಸಂಕಷ್ಟ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಹಲವಾರು ಆಟೋ ಚಾಲಕರು ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಸೇರಿದಂತೆ ಶ್ರಮಾಧಾರಿತ ಕೆಲಸಗಳಿಗೆ ತೊಡಗಿಕೊಳ್ಳುತ್ತಿದ್ದಾರೆ. ಎಲ್ ಪಿ ಜಿ ಗ್ಯಾಸ್ ಬೆಲೆ ಏರಿಕೆ ಹಾಗೂ ಸಮರ್ಪಕ ಪೂರೈಕೆ ಕೊರತೆ ಕಾರಣದಿಂದ ಆಟೋ ಚಾಲನೆ ನಡೆಸುವುದು ನಷ್ಟದ ವ್ಯವಹಾರವಾಗಿ ಪರಿಣಮಿಸಿದೆ.
ಇದಕ್ಕೆ ಜೀವಂತ ಉದಾಹರಣೆ ಎಂದರೆ ಗದಗ ನಗರದ ಕಳಸಾಪುರ ರಸ್ತೆಯ ನಿವಾಸಿ ಮಂಜುನಾಥ ಪೂಜಾರ. ಸ್ವಂತ ಆಟೋ ಹೊಂದಿದ್ದರೂ, ಗ್ಯಾಸ್ ದರ ಏರಿಕೆ ಮತ್ತು ಪ್ರಯಾಣಿಕರ ಕೊರತೆಯಿಂದಾಗಿ ಅವರು ಇದೀಗ ಗಾರೆ ಕೆಲಸಕ್ಕೆ ಹೋಗುವಂತಾಗಿದೆ. “ಹಿಂದೆ ದಿನಕ್ಕೆ 500ರಿಂದ 1000 ರೂಪಾಯಿವರೆಗೆ ಸಂಪಾದನೆ ಆಗುತ್ತಿತ್ತು. ಈಗ ಗ್ಯಾಸ್ ದುಬಾರಿಯಾದ ಮೇಲೆ ಆಟೋ ಓಡಿಸಿದರೆ 100-200 ರೂಪಾಯಿಗೂ ಸರಿಯಾಗುತ್ತಿಲ್ಲ,” ಎಂದು ಅವರು ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
ಮಂಜುನಾಥ ಪೂಜಾರ ಅವರಿಗೆ ಬಾಡಿಗೆ ಮನೆ, ಗರ್ಭಿಣಿ ಪತ್ನಿ ಹಾಗೂ ಮಕ್ಕಳ ಜವಾಬ್ದಾರಿ ಇದೆ. ಜೊತೆಗೆ ಆಟೋ ವಾಹನದ ಇಎಂಐ ಕೂಡ ಕಟ್ಟಬೇಕಿದೆ. ಆದಾಯ ಕಡಿಮೆಯಾಗಿರುವ ಕಾರಣ ಮನೆ ಖರ್ಚು ನಿರ್ವಹಿಸುವುದೇ ಕಷ್ಟಕರವಾಗಿದೆ. “ಒಂದು ಕಡೆ ಕುಟುಂಬದ ಜವಾಬ್ದಾರಿ, ಮತ್ತೊಂದು ಕಡೆ ಸಾಲದ ಒತ್ತಡ. ಆಟೋ ಓಡಿಸಿದರೆ ಲಾಭವೇ ಇಲ್ಲ. ಅದಕ್ಕಿಂತ ಗಾರೆ ಕೆಲಸ ಮಾಡಿದರೆ ಕನಿಷ್ಠ 500ರಿಂದ 700 ರೂಪಾಯಿವರೆಗೆ ಸಿಗುತ್ತದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಬ್ಬ ಚಾಲಕನ ಕಥೆಯಲ್ಲ, ಗದಗ ಜಿಲ್ಲೆಯ ಹಲವಾರು ಆಟೋ ಚಾಲಕರ ಪರಿಸ್ಥಿತಿ ಇದೇ ರೀತಿಯಾಗಿದೆ. ಎಲ್ ಪಿ ಜಿ ಗ್ಯಾಸ್ ಬೆಲೆ ಏರಿಕೆಯಿಂದಾಗಿ ದಿನನಿತ್ಯದ ಆದಾಯದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಅನಿವಾರ್ಯವಾಗಿ ಬೇರೆ ಉದ್ಯೋಗಗಳತ್ತ ಮುಖ ಮಾಡುವಂತಾಗಿದೆ.
ಇದೇ ವೇಳೆ, ಪ್ರಯಾಣಿಕರು ಹೆಚ್ಚುವರಿ ದರ ನೀಡಲು ಸಮ್ಮತಿಸದೇ ಇರುವುದರಿಂದ ಚಾಲಕರಿಗೆ ಇನ್ನಷ್ಟು ಸಂಕಷ್ಟ ಎದುರಾಗುತ್ತಿದೆ. ಗ್ಯಾಸ್ ದರ ಏರಿಕೆಯ ಹೊರೆ ಸಂಪೂರ್ಣವಾಗಿ ಚಾಲಕರ ಮೇಲೇ ಬೀಳುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ, ಸರ್ಕಾರ ಆಟೋ ಚಾಲಕರ ಸಂಕಷ್ಟವನ್ನು ಮನಗಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP