ಬಿಜೆಪಿ ಯುವ ಮೋರ್ಚಾದಿಂದ ಪೊಲೀಸರಿಗೆ ಮನವಿ
ಗದಗ, 12 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಬಿಜೆಪಿ ಶಿರಹಟ್ಟಿ ಮಂಡಳ ಯುವ ಮೋರ್ಚಾ ಕಾರ್ಯಕರ್ತರು ಲಕ್ಷೇಶ್ವರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮನವಿ ಸಲ್ಲ
ಫೋಟೋ


ಗದಗ, 12 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಬಿಜೆಪಿ ಶಿರಹಟ್ಟಿ ಮಂಡಳ ಯುವ ಮೋರ್ಚಾ ಕಾರ್ಯಕರ್ತರು ಲಕ್ಷೇಶ್ವರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ಪೊಲೀಸ್ ಇಲಾಖೆಯ ಸಿಪಿಐ ಬಿ.ವಿ. ನ್ಯಾಮಗೌಡ ಹಾಗೂ ಪಿಎಸ್ಐ ನಾಗರಾಜ ಗಡದ ಅವರಿಗೆ ಮನವಿ ಪತ್ರ ಸಲ್ಲಿಸಿದ ಕಾರ್ಯಕರ್ತರು, ಜವಾಬ್ದಾರಿಯುತ ಹುದ್ದೆಯಲ್ಲಿ ಇರುವ ನಾಯಕರು ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಅಸಮಂಜಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಪತ್ರದಲ್ಲಿ, ಅಸ್ಸಾಂ ಚುನಾವಣಾ ಪ್ರಚಾರದ ವೇಳೆ ಖರ್ಗೆಯವರು ನೀಡಿದ ಹೇಳಿಕೆಗಳು ದೇಶದಲ್ಲಿರುವ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ಮನೋಭಾವನೆಗೆ ಧಕ್ಕೆಯನ್ನು ಉಂಟುಮಾಡಿದ್ದು, ಅವರ ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದಲ್ಲದೆ, ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ದಾಳಿ ನಡೆಯುವ ಭೀತಿಯನ್ನು ಉಂಟುಮಾಡುತ್ತವೆ ಎಂದು ಉಲ್ಲೇಖಿಸಲಾಗಿದೆ.

ಖರ್ಗೆಯವರು ಮಾಡಿದ ಭಾಷಣವು ದೇಶದಾದ್ಯಂತ ಸಂಘ ಪರಿವಾರದ ವಿರುದ್ಧದ ಪ್ರಚೋದನೆ ಎಂದು ಪರಿಗಣಿಸಬೇಕಿದ್ದು, ಇದರ ಪರಿಣಾಮ ಗಂಭೀರವಾಗುವ ಸಾಧ್ಯತೆ ಇರುವುದರಿಂದ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಮತಿಗೇಡಿಗಳಿಗೆ ಉತ್ತೇಜನ ನೀಡುವಂತಹ ಹೇಳಿಕೆಗಳು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟುಮಾಡುತ್ತವೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರು ಯಾವುದೇ ಅಧಿಕೃತ ದೂರುಗಾಗಿ ಕಾಯದೇ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಮ್ಮ ಮನವಿಯಲ್ಲಿ ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ. ಖರ್ಗೆಯವರು ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಉಲ್ಲೇಖಿಸಿ ನೀಡಿದ ಹೇಳಿಕೆಗಳು ಮೂಲಭೂತವಾದಿಗಳಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.

ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಖರ್ಗೆಯವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದೇ ವೇಳೆ, ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆ ಅವರು ಆರ್ಎಸ್ಎಸ್ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನೂ ಕಾರ್ಯಕರ್ತರು ಖಂಡಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಶಿರಹಟ್ಟಿ ಮಂಡಳ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಜಿಲ್ಲಾ ಪ್ರ. ಕಾರ್ಯದರ್ಶಿ ಶಕ್ತಿ ಕತ್ತಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಭೀಮಣ್ಣ ಯಂಗಾಡಿ, ನಗರ ಯುವ ಮೋರ್ಚಾ ಅಧ್ಯಕ್ಷ ಈರಣ್ಣ ಪೂಜಾರ, ಥಾವರಪ್ಪ ಲಮಾಣಿ, ಚಂದ್ರು ಲಮಾಣಿ, ಆಕಾಶ್ ಸೌದತ್ತಿ, ನವೀನ ಕುಂಬಾರ, ಹನುಮಂತ ಜಾಲಿಮರದ, ಲಕ್ಷಣ ಹಳ್ಳಿಕೇರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ, ಈ ಮನವಿ ಮೂಲಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದೇಶದಲ್ಲಿ ಶಾಂತಿ-ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande