
ಗದಗ, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಡತನವೇ ದೊಡ್ಡ ಅಡ್ಡಿಯಾಗಿದ್ದರೂ, ಸಾಧಿಸುವ ಛಲವಿದ್ದರೆ ಯಾವ ಅಡೆತಡೆಯೂ ಗುರಿಯನ್ನು ತಡೆಯಲಾರದು ಎಂಬುದಕ್ಕೆ ಲಕ್ಷೇಶ್ವರ ತಾಲೂಕಿನ ದೊಡ್ಡರ ತಾಂಡಾದ ಅನಿಲ ಲಮಾಣಿ ಜೀವಂತ ಉದಾಹರಣೆಯಾಗಿದ್ದಾನೆ. ಹಾದಿ ಬೀದಿಯಲ್ಲಿ ಕಲ್ಲಂಗಡಿ ಹಣ್ಣು ಮಾರುವ ತಂದೆ ಹಾಗೂ ಕೂಲಿ ಕೆಲಸ ಮಾಡುವ ತಾಯಿಯ ಪುತ್ರನಾದ ಅನಿಲ, ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಶೇ. 85ರಷ್ಟು ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾನೆ.
ಸಮೀಪದ ಮುಳಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದಿದ್ದ ಅನಿಲ, ತನ್ನ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಾಧಿಸಿದ್ದಾನೆ. ಆದರೆ, ಈ ಸಾಧನೆಯ ಹಿಂದೆ ಇರುವ ಸಂಕಷ್ಟದ ಕಥೆ ಮನಕಲುಕುವಂತಿದೆ. ಪಿಯುಸಿ ನಂತರ ಉನ್ನತ ಶಿಕ್ಷಣ ಮುಂದುವರಿಸಲು ಅನಿಲನಿಗೆ ಆರ್ಥಿಕ ಅಡೆತಡೆ ಎದುರಾಗಿದೆ. ದೊಡ್ಡ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕವನ್ನು ಕಟ್ಟುವ ಸಾಮರ್ಥ್ಯ ಕುಟುಂಬಕ್ಕಿಲ್ಲ. ಹೀಗಾಗಿ ಪರೀಕ್ಷೆ ಮುಗಿದ ತಕ್ಷಣವೇ ಲಕ್ಷೇಶ್ವರ ಪಟ್ಟಣದಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ.
ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲಾ ರಜೆ ದಿನಗಳಲ್ಲಿಯೇ ತಂದೆ-ತಾಯಿಯೊಂದಿಗೆ ದುಡಿದಿದ್ದ ಅನಿಲ, ಈಗ ಬಿಸಿಲಿನ ತಾಪದಲ್ಲೂ ದುಡಿಯುತ್ತಲೇ ತನ್ನ ವಿದ್ಯಾಭ್ಯಾಸದ ಕನಸನ್ನು ಉಳಿಸಿಕೊಂಡಿದ್ದಾನೆ. ದಿನದ ಹೊತ್ತಿನಲ್ಲಿ ದುಡಿಯುತ್ತಾ, ರಾತ್ರಿ ವೇಳೆ ಮುಂದಿನ ಶಿಕ್ಷಣದ ಕನಸನ್ನು ಕಟ್ಟಿಕೊಳ್ಳುತ್ತಿರುವುದು ಅವನ ದೃಢಸಂಕಲ್ಪವನ್ನು ತೋರಿಸುತ್ತದೆ.
ಇನ್ನೂ ಕುಟುಂಬದ ಜವಾಬ್ದಾರಿಗಳು ಅನಿಲನ ಮೇಲೆ ಹೆಚ್ಚಾಗಿವೆ. ಅವನ ತಮ್ಮ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ತಂಗಿ ಅಂಕವಿಕಲೆಯಾಗಿದ್ದು ವಿಶೇಷ ಆರೈಕೆ ಅಗತ್ಯವಿದೆ. ಇಂತಹ ಸಂಕಷ್ಟದ ನಡುವೆಯೂ ಮಗನನ್ನು ಓದಿಸಲು ಶಕ್ತಿಮೀರಿದ ಪ್ರಯತ್ನ ಮಾಡುವುದಾಗಿ ತಂದೆ ಮಲ್ಲೇಶಪ್ಪ ಹಾಗೂ ತಾಯಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಅನಿಲನಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ದಾನಿಗಳ ನೆರವು ದೊರೆಯುವ ಅಗತ್ಯವಿದೆ. ಸೂಕ್ತ ಆರ್ಥಿಕ ಸಹಾಯ ಮತ್ತು ಮಾರ್ಗದರ್ಶನ ದೊರೆತರೆ, ಈ ಯುವಕ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳನ್ನು ಮಾಡುವಲ್ಲಿ ಸಂಶಯವೇ ಇಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP