
ಗದಗ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಬೆಳವಣಿಗೆಯಲ್ಲಿ ಹೋಟೆಲ್ ಉದ್ಯಮದ ಪಾತ್ರ ಮಹತ್ವದ್ದಾಗಿದ್ದು, ಸ್ಥಳೀಯ ಆಹಾರ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಯೂ ಹೋಟೆಲ್ ಕ್ಷೇತ್ರದ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಕೆ. ಪಾಟೀಲ ಹೇಳಿದರು.
ಗದಗ ನಗರದ ಹೊಸ ಬಸ್ ನಿಲ್ದಾಣದ ಎದುರು ಹೋಟೆಲ್ ಒಡೆಯರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೋಟೆಲ್ ಕ್ಷೇತ್ರವು ಕೇವಲ ವ್ಯವಹಾರ ಮಾತ್ರವಲ್ಲದೆ ಸಮಾಜ ಸೇವೆಯ ಒಂದು ಪ್ರಮುಖ ಅಂಗವಾಗಿದೆ. ಈ ಕ್ಷೇತ್ರದಿಂದಲೇ ಅನೇಕ ಗಣ್ಯರು ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಪರಂಪರೆಯ ಆಹಾರ ಪದ್ಧತಿಗೆ ಇತ್ತೀಚೆಗೆ ಕಡಿಮೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ ಸಚಿವರು, ಜೋಳದ ರೊಟ್ಟಿ, ಮಿರ್ಚಿ, ಬೆಟಗೇರಿ ಚಟ್ಟೆಯಂತಹ ಸ್ಥಳೀಯ ಆಹಾರಗಳನ್ನು ಉತ್ತೇಜಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ನಗರದಲ್ಲಿಯೂ ಜೋಳದ ರೊಟ್ಟಿಯನ್ನು ಪರಿಚಯಿಸಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸ್ಥಳೀಯ ಆಹಾರ ಪದ್ಧತಿಯನ್ನು ಉಳಿಸುವ ಮೂಲಕ ಗದಗ ಜಿಲ್ಲೆಗೆ ವಿಶೇಷ ಹೆಮ್ಮೆ ತರಬಹುದು ಎಂದು ತಿಳಿಸಿದರು.
“ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಯಿಂದ ಜಿಲ್ಲೆಯ ಹೋಟೆಲ್ ಕ್ಷೇತ್ರವೂ ಬೆಳವಣಿಗೆ ಕಂಡಿದೆ. ಉದಯರಾಗ ಮತ್ತು ಸಂಧ್ಯಾರಾಗ ಕಾರ್ಯಕ್ರಮಗಳಿಗೆ ಉಪಹಾರದ ವ್ಯವಸ್ಥೆ ಮಾಡಲು ನಾವು ಸಿದ್ಧರಾಗಿದ್ದೇವೆ” ಎಂದು ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಹೋಟೆಲ್ ಒಡೆಯರ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಎಚ್. ವಿಶ್ವನಾಥ ಶೆಟ್ಟಿ, ಬಿ.ಬಿ. ಅಸೂಟಿ, ಕೆ. ಸುಧಾಕರ ರಾವ್, ಬಿ. ರಾಜೀವ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP