
ಗದಗ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯನ್ನು ತಡೆಗಟ್ಟಲು ಗದಗ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮನ್ವಯದೊಂದಿಗೆ ಮಹತ್ವದ ಕ್ರಮಗಳನ್ನು ಕೈಗೊಂಡಿವೆ. ಮುಂಡರಗಿ ತಾಲೂಕಿನ ವಿವಿಧ ಗ್ರಾಮಗಳ ಸುತ್ತಮುತ್ತ ಚಕ್ ಪೋಸ್ಟ್ಗಳನ್ನು ಸ್ಥಾಪಿಸಿ ನಿಗಾವ್ಯವಸ್ಥೆಯನ್ನು ಬಲಪಡಿಸಲಾಗಿದೆ.
ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಶಿರಹನಳ್ಳಿ ಹಾಗೂ ಸಿಂಗಟಾಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಚಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮ ಮರಳು ಸಾಗಾಟವನ್ನು ನಿಯಂತ್ರಿಸಲು ಹೋಮ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.
ಇದಲ್ಲದೆ, ನದಿದಡ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಂಶಯಾಸ್ಪದ ವಾಹನಗಳ ಸಂಚಾರದ ಮೇಲೆ ಕಣ್ಣಿಟ್ಟಿದ್ದಾರೆ ಅಧಿಕಾರಿಗಳು. ಅಕ್ರಮ ಮರಳು ಸಾಗಾಟಕ್ಕೆ ಬಳಸುವ ವಾಹನಗಳನ್ನು ತಡೆದು ಪರಿಶೀಲನೆ ನಡೆಸುವ ಕಾರ್ಯವೂ ಚಕ್ ಪೋಸ್ಟ್ಗಳಲ್ಲಿ ನಿರಂತರವಾಗಿ ನಡೆಯುತ್ತಿದೆ.
ಇದೇ ವೇಳೆ ಮುಂಡರಗಿ ಪೊಲೀಸರು ಸಹ ಗಸ್ತು ತಿರುಗುವ ಕಾರ್ಯವನ್ನು ಹೆಚ್ಚಿಸಿದ್ದು, ರಾತ್ರಿ ವೇಳೆಗಳಲ್ಲಿ ವಿಶೇಷ ನಿಗಾ ವಹಿಸುತ್ತಿದ್ದಾರೆ. ಮರಳು ದಂಧೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ನದಿ ತೀರ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಇದರಿಂದ ನದಿಯ ಪರಿಸರ ಸಮತೋಲನ ಹಾನಿಯಾಗುತ್ತಿರುವುದರ ಜೊತೆಗೆ ಸರ್ಕಾರಕ್ಕೂ ಆದಾಯ ನಷ್ಟವಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ನಿಗಾವ್ಯವಸ್ಥೆಯನ್ನು ಬಲಪಡಿಸಿದೆ.
ಸ್ಥಳೀಯರು ಜಿಲ್ಲಾಡಳಿತದ ಈ ಕ್ರಮವನ್ನು ಸ್ವಾಗತಿಸಿದ್ದು, ಅಕ್ರಮ ಚಟುವಟಿಕೆಗಳು ಸಂಪೂರ್ಣವಾಗಿ ನಿಲ್ಲುವಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ, ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಕೈಗೊಂಡಿರುವ ಈ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾದರೆ ಪರಿಸರ ಸಂರಕ್ಷಣೆಗೂ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP