
ಗದಗ, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರ ಕೆರೆಯ ಅಭಿವೃದ್ಧಿಗೆ ಮತ್ತೆ ₹1 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಈ ಕೆರೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಜಿಗಳೂರ ಕೆರೆ ತಟದಲ್ಲಿ ನಿರ್ಮಿಸಲಾದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ಗುರುತಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಪ್ಪತ್ತಗುಡ್ಡ, ಲಕ್ಕುಂಡಿ, ಗಜೇಂದ್ರಗಡ, ಸೂಡಿ ಸೇರಿದಂತೆ ಹಲವು ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಗಳೂರ ಕೆರೆ ತಟದಲ್ಲಿ ನಿರ್ಮಿತವಾದ ವೃಕ್ಷೋದ್ಯಾನವನದಲ್ಲಿ ವಿವಿಧ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕರು ಕುಟುಂಬ ಸಮೇತ ವೀಕ್ಷಿಸಲು ಅನುಕೂಲಕರ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಆಟೋಪಕರಣಗಳನ್ನೂ ಅಳವಡಿಸಲಾಗಿದ್ದು, ಇದು ಶಾಲಾ ವಿದ್ಯಾರ್ಥಿಗಳಿಗೆ ಪಿಕ್ನಿಕ್ ತಾಣವಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ಅವರು ಶಾಸಕ ಜಿ ಎಸ್ ಪಾಟೀಲ್ ಅವರನ್ನು ಸಚಿವ ಸ್ಥಾನಕ್ಕೆ ಅತ್ಯಂತ ಅರ್ಹ ವ್ಯಕ್ತಿ ಎಂದು ಪ್ರಶಂಸಿಸಿದರು. ಅವರ ಚಿಂತನೆ, ಅಭಿವೃದ್ಧಿ ಕಾರ್ಯಗಳು ಹಾಗೂ ಬಡವರ ಪರವಾದ ಕಾಳಜಿ ಗಮನಾರ್ಹವಾಗಿದೆ ಎಂದು ಹೇಳಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರೋಣದಲ್ಲಿ ಕುಟುಂಬ ಸಮೇತ ವೀಕ್ಷಿಸಲು ತಾಣಗಳ ಕೊರತೆ ಇನ್ನು ಮುಂದೆ ಇರುವುದಿಲ್ಲ. ಕೆರೆ ಅಭಿವೃದ್ಧಿಗೆ ಇನ್ನಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಬೋಟಿಂಗ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ₹38 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP