
ಹಾಸನ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರ ಸಮಸ್ಯೆಗಳನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೇಲೂರು ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು ಕಾಟಾಚಾರಕ್ಕೆ ಅರ್ಜಿ ವಿಲೇವಾರಿ ಮಾಡದೆ ನೈಜತೆಯನ್ನು ಅರಿತು ಪರಿಶೀಲನೆ ನಡೆಸಿ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಲ್ಲಿ ಆಯೋಜಿಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರಲ್ಲದೆ, ಆಡಳಿತದ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗುತ್ತದೆ ಎಂದರು.
ಇಂತಹ ವೇದಿಕೆಗಳ ಮೂಲಕ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವುದರಿಂದ ಮಧ್ಯವರ್ತಿಗಳ ಹಾವಳಿ ಕೂಡ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಈ ಹಿಂದೆ ಹಾಸನದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ 860, ಚನ್ನರಾಯಪಟ್ಟಣದಲ್ಲಿ 1069, ಸಕಲೇಶಪುರದಲ್ಲಿ 964 ಅರ್ಜಿಗಳು ಸೇರಿದಂತೆ ಒಟ್ಟು 2893 ಅರ್ಜಿಗಳಲ್ಲಿ 56 ಮಾತ್ರ ವಿಲೇವಾರಿಗೆ ಬಾಕಿಯಿವೆ. ಈಗಾಗಲೇ ವಿಲೇವಾರಿಯಾದ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಮರ್ಪಕವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಮೀನು ಮಂಜೂರಾಗಿ ಪೋಡಿಯಾಗದೆ ಉಳಿದಿದ್ದವುಗಳಲ್ಲಿ 20000 ಪೋಡಿ ಮಾಡುವ ಕೆಲಸ ನಡೆಯುತ್ತಿದೆ. ಇದರಿಂದ 28 ಸಾವಿರ ರೈತರಿಗೆ ನೆರವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ 730 ವಸತಿ ಪ್ರದೇಶಗಳನ್ನು ಗುರುತಿಸಲಾಗಿದ್ದು,29000 ಕುಟುಂಬಗಳು ವಾಸವಿದ್ದಾರೆ ಇವರಿಗೆ ಹಕ್ಕು ಪತ್ರ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗು ತ್ತಿದೆ. ಜನಗಣತಿ ಕಾರ್ಯ ನಡೆಯುತ್ತಿರುವುದರಿಂದ 2027 ರ ಜೂನ್ ತಿಂಗಳಲ್ಲಿ ಜನಗಣ ಕಾರ್ಯ ಪೂರ್ಣಗೊಂಡ ನಂತರ ಹಕ್ಕು ಪತ್ರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಇಂದು ಬೇಲೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನದ ಜಾಗ ಒತ್ತುವರಿ, ಅಂಗನವಾಡಿ ರಿಪೇರಿ, ಜಮೀನಿಗೆ ದಾರಿ, ಪುರಸಭೆ ಕಾರ್ಮಿಕರಿಗೆ ಪಿ.ಎಫ್. ಹಣ ಕಟ್ಟುವ ಕುರಿತು, ಹಕ್ಕು ಪತ್ರ, ವಿದ್ಯುತ್ ಲೈನ್ ಸ್ಥಳಾಂತರ, ಖಾತೆ ಬದಲಾವಣೆ, ಜಮೀನು ಒತ್ತುವರಿ ತೆರವು, ಇಂಡೀಕರಣ, ಪೋಡಿ ದುರಸ್ಥಿ, ಇ-ಸ್ವತ್ತು, ಕುಡಿಯುವ ನೀರು, ಕಾಂಕ್ರೀಟ್ ರಸ್ತೆ ಮತ್ತಿತರ ವಿಷಯಗಳ ಕುರಿತಂತೆ ಒಟ್ಟು 1610 ಅರ್ಜಿಗಳು ನೊಂದಣಿಯಾಗಿದ್ದು, ಸಂಜೆ 5.30 ರ ಸಮಯಕ್ಕೆ 745 ಅರ್ಜಿಗಳನ್ನು ಸಚಿವರು ಸ್ವೀಕರಿಸಿದರು.
ಸರ್ಕಾರಿ ಜಾಗ, ಕೆರೆ, ಗೋಮಾಳ ಒತ್ತುವರಿಯಾಗಿ ರುವುದನ್ನು ತೆರವುಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂಸದರಾದ ಶ್ರೇಯಸ್ ಪಟೇಲ್ ,ಶಾಸಕರಾದ ಹೆಚ್.ಕೆ.ಸುರೇಶ್, ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷರಾದ ಆನಂದ ಮೂರ್ತಿ , ನಗರ ಸ್ಥಳೀಯ ಯೋಜನಾ ಪ್ರಾಧಿಕಾರಾದ ಅಧ್ಯಕ್ಷರಾದ ಸೈಯದ್ ತೌಫಿಕ್ ಅಹಮದ್, ಪುರಸಭೆಯ ಪ್ರಭಾರಿ ಅಧ್ಯಕ್ಷರಾದ ಉಷಾ ಸತೀಶ್,ಬಗರ್ ಹುಕುಂ ಸಮಿತಿಯ ಸದಸ್ಯರಾದ ನಾಗೇಗೌಡ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa