
ಹುಬ್ಬಳ್ಳಿ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷ್ ಸಿಂಗ್ ಜಮಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹಾಗೂ ದೇಶಭಕ್ತ ಸಾಹಿತ್ಯಕ್ಕೆ ಡಾ. ರಾಮಸ್ವಾಮಿ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಬರಹಗಳು ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸಿದ್ದವು. ರಾಷ್ಟೋತ್ಥಾನ ಪರಿಷತ್ ಸಂಸ್ಥೆಯ ಬೆಳವಣಿಗೆಯಲ್ಲಿ ಅವರು ವಹಿಸಿದ್ದ ಪಾತ್ರ ಮಹತ್ವದ್ದಾಗಿತ್ತು. ಸರಳತೆ ಮತ್ತು ನಿರ್ಗರ್ವಿತ್ವ ಅವರ ವ್ಯಕ್ತಿತ್ವದ ಪ್ರಮುಖ ಲಕ್ಷಣಗಳಾಗಿದ್ದವು ಎಂದು ಅವರು ತಿಳಿಸಿದ್ದಾರೆ.
2015ರಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಸಿಂಡಿಕೇಟ್ ಸದಸ್ಯನಾಗಿದ್ದ ಸಂದರ್ಭದಲ್ಲಿ ಡಾ. ರಾಮಸ್ವಾಮಿ ಅವರಿಗೆ ನಾಡೋಜ ಪ್ರಶಸ್ತಿ ಲಭಿಸಿದ ಕ್ಷಣವನ್ನು ಜಮಾದಾರ ಸ್ಮರಿಸಿಕೊಂಡಿದ್ದಾರೆ. ಆ ಕಾರ್ಯಕ್ರಮದಲ್ಲಿ ದಿವಂಗತ ಕನ್ನಡ ಪತ್ರಿಕೋದ್ಯಮದ ದಿಗ್ಗಜ ಡಾ. ಪಾಟೀಲ ಪುಟ್ಟಪ್ಪ ಅವರು ಭಾಗವಹಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.
ಡಾ. ರಾಮಸ್ವಾಮಿ ಅವರು ಬಲಪಂಥೀಯ ಲೇಖಕರು ಎಂಬ ಕಾರಣಕ್ಕೆ ಕೆಲವರು ನಾಡೋಜ ಪ್ರಶಸ್ತಿ ನೀಡುವುದನ್ನು ವಿರೋಧಿಸಿದ್ದರೂ, ಆ ಸಂದರ್ಭದಲ್ಲಿ ಡಾ. ಪಾಟೀಲ ಪುಟ್ಟಪ್ಪ ಅವರು “ಈ ಪ್ರಶಸ್ತಿ ಅವರಿಗೆ ಇದಕ್ಕೂ ಮುಂಚೆಯೇ ಸಿಗಬೇಕಾಗಿತ್ತು ಇದು ಸೂಕ್ತ ವ್ಯಕ್ತಿಗೆ ದೊರೆತ ಗೌರವ” ಎಂದು ಸ್ಪಷ್ಟಪಡಿಸಿದ್ದನ್ನು ಜಮಾದಾರ ನೆನಪಿಸಿಕೊಂಡರು.
ವಿಚಾರಧಾರೆಗಳಲ್ಲಿ ಭಿನ್ನತೆ ಇದ್ದರೂ, ಯೋಗ್ಯತೆಯನ್ನು ಗುರುತಿಸಿ ಗೌರವಿಸುವುದು ಮುಖ್ಯ ಎಂಬ ಸಂದೇಶವನ್ನು ಆ ಘಟನೆ ನೀಡುತ್ತದೆ. ಭಿನ್ನಾಭಿಪ್ರಾಯದ ನೆಲೆಯಲ್ಲಿ ಪ್ರಶಸ್ತಿ ವಿರೋಧಿಸುವವರಿಗೆ ಇದು ದಾರಿದೀಪವಾಗಿದೆ ಎಂದು ಅವರು ಹೇಳಿದ್ದಾರೆ.
ಡಾ. ಎಸ್. ಆರ್. ರಾಮಸ್ವಾಮಿ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸುಭಾಷ್ ಸಿಂಗ್ ಜಮಾದಾರ ಶೋಕ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa